
ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ಆಯ್ಕೆಯಾಗಿದ್ದಾರೆ. ನಾಯಕತ್ವದ ರೇಸ್ನಲ್ಲಿದ್ದ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಅವರನ್ನು ಹಿಂದಿಕ್ಕಿ ನಾಯಕನ ಪಟ್ಟಕ್ಕೇರುವಲ್ಲಿ ಸೂರ್ಯ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೂ ಮುನ್ನವೇ ಸೂರ್ಯಕುಮಾರ್ಗೆ ನಾಯಕತ್ವ ಸಿಗುವ ಮುನ್ಸೂಚನೆ ಸಿಕ್ಕಿತ್ತು ಎಂಬುದು ವಿಶೇಷ.

ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಯೊಂದಿಗೆ ಇತ್ತೀಚೆಗೆ ಉಡುಪಿಯ ಕಾಪುವಿನ ಮಾರಿಯಮ್ಮನ ಗುಡಿಗೆ ಭೇಟಿ ನೀಡಿದ್ದರು. ಟಿ20 ವಿಶ್ವಕಪ್ ಗೆಲ್ಲಲು ಹರಕೆ ಹೊತ್ತಿದ್ದ ಸೂರ್ಯ, ಹರಕೆ ತೀರಿಸಲೆಂದು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಹೀಗೆ ಪೂಜೆ ಮುಗಿಸಿ ಹಿಂತಿರುಗುವ ಮುನ್ನ ನಾಯಕನಾದ ಬಳಿಕ ಮತ್ತೊಮ್ಮೆ ಮಾರಿಯಮ್ಮನ ದರ್ಶನಕ್ಕೆ ಬರುವಂತೆ ತಿಳಿಸಿದ್ದರು.

ಹೌದು, ಪೂಜೆಯ ಬಳಿಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ ಮಾರಿಗುಡಿ ದೇವಸ್ಥಾನದ ಆರ್ಚಕರು, ಟೀಮ್ ಇಂಡಿಯಾದ ನಾಯಕರಾಗಿ ಮತ್ತೆ ಕಾಪುವಿಗೆ ಬನ್ನಿ ಎಂದು ಆಶೀರ್ವಾದ ಮಾಡಿದರು. ದೇವರ ಸನ್ನಿಧಿಯಲ್ಲಿ ಮಾಡಿದ ಈ ಆಶೀರ್ವಾದ ಇದೀಗ ಸೂರ್ಯಕುಮಾರ್ ಯಾದವ್ ಅವರ ಕೈ ಹಿಡಿದಿದೆ ಎಂದರೆ ತಪ್ಪಾಗಲಾರದು.

ಏಕೆಂದರೆ ಆರ್ಚಕರು ಆಶಿರ್ವಾದ ಮಾಡಿದಾಗಲೂ, ಭಾರತ ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನನ್ನ ಗುರಿ. ದೇವರು ಇಚ್ಚಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದರು.

ಅದ್ಯಾವ ಶುಭಘಳಿಗೆಯಲ್ಲಿ ಆರ್ಚಕರಿಂದ ಮತ್ತು ಸೂರ್ಯಕುಮಾರ್ ಯಾದವ್ ಅವರಿಂದ ಮಾರಿಗುಡಿ ಸನ್ನಿಧಿಯಲ್ಲಿ ಈ ಮಾತು ಬಂತೋ, ಅದೀಗ ನಿಜವಾಗಿದೆ. ಎಲ್ಲರೂ ಅಚ್ಚರಿಪಡುವಂತೆ ಭಾರತ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ ಅವರಿಗೆ ಒಲಿದಿದೆ.

ಹೀಗೆ ಅನಿರೀಕ್ಷಿತವಾಗಿ ಸಿಕ್ಕ ನಾಯಕತ್ವದ ಬಗ್ಗೆ ಸಂತಸ ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್ ಕೂಡ ಇದೆಲ್ಲವೂ ದೇವರ ದಯೆಯಿಂದ ಎಂದು ತಿಳಿಸಿದ್ದಾರೆ. ಹೊಸ ಜವಾಬ್ದಾರಿವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ. ಎಲ್ಲಾ ಕೀರ್ತಿಯು ದೇವರಿಗೆ ಸಲ್ಲುತ್ತದೆ. ದೇವರು ದೊಡ್ಡವನು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ಒಲಿಯಲು ಮಾರಿಯಮ್ಮನ ಕೃಪೆಯೇ ಕಾರಣ ಎನ್ನಲಾಗುತ್ತಿದೆ.