
ನ್ಯೂಝಿಲೆಂಡ್ ತಂಡದ ಆಟಗಾರ್ತಿ ಸುಝಿ ಬೇಟ್ಸ್ (Suzie Bates) ಮಹಿಳಾ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಅತ್ಯಧಿಕ ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ಇಂದೋರ್ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ 7ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸುಝಿ ವಿಶೇಷ ಮೈಲುಗಲ್ಲು ಮುಟ್ಟಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಸುಝಿ ಬೇಟ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ 38 ವರ್ಷದ ಸುಝಿ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

2006 ರಲ್ಲಿ ಭಾರತದ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ ಸುಝಿ ಬೇಟ್ಸ್ ಈವರೆಗೆ 173 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 166 ಇನಿಂಗ್ಸ್ ಆಡಿರುವ ಅವರು 13 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 5896 ರನ್ ಕಲೆಹಾಕಿದ್ದಾರೆ. ಅಲ್ಲದೆ 81 ಏಕದಿನ ವಿಕೆಟ್ಗಳನ್ನು ಸಹ ಪಡೆದಿದ್ದಾರೆ.

ಇನ್ನು 2007 ರಲ್ಲಿ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನ ಶುರು ಮಾಡಿದ ಸುಝಿ ಈವರೆಗೆ ಆಡಿರುವುದು ಬರೋಬ್ಬರಿ 177 ಪಂದ್ಯಗಳು. ಈ ವೇಳೆ 174 ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4343 ರನ್ ಕಲೆಹಾಕಿದ್ದಾರೆ. ಹಾಗೆಯೇ 60 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.

ಇದೀಗ ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ನೊಂದಿಗೆ ಸುಝಿ ಬೇಟ್ಸ್ ಅಂತಾರಾಷ್ಟ್ರೀಯ ಕೆರಿಯರ್ ಕೊನೆಗೊಳಿಸುವುದು ಬಹುತೇಕ ಖಚಿತ. ಅದಕ್ಕೂ ಮುನ್ನ 350 ಏಕದಿನ ಪಂದ್ಯಗಳ ಮೈಲುಗಲ್ಲಿನ ಮೂಲಕ ಹೊಸ ವಿಶ್ವ ದಾಖಲೆಯನ್ನು ಸುಝಿ ತಮ್ಮದಾಗಿಸಿಕೊಂಡಿದ್ದಾರೆ.
Published On - 1:08 pm, Tue, 7 October 25