- TV9 Kannada Photo gallery Cricket photos India vs WI T20: Ishan Kishan Surpasses Kohli for Calendar Year Runs
ಅತಿ ಹೆಚ್ಚು ರನ್; ಕಿಂಗ್ ಕೊಹ್ಲಿ ದಾಖಲೆ ಮುರಿದ ಇಶಾನ್ ಕಿಶನ್
ಭಾರತ-ವೆಸ್ಟ್ ಇಂಡೀಸ್ ಮೊದಲ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ನಾಯಕ ಶ್ರೇಯಸ್ ಅಯ್ಯರ್ ಚೊಚ್ಚಲ T20I ಶತಕ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಅಜೇಯ 37 ರನ್ ಗಳಿಸಿದ ಇಶಾನ್ ಕಿಶನ್, ವಿರಾಟ್ ಕೊಹ್ಲಿಯ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದು, ಅಂತರರಾಷ್ಟ್ರೀಯ T20 ಕ್ರಿಕೆಟ್‌ನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಿಶನ್ ಬೌಂಡರಿಗಳ ದಾಖಲೆಯನ್ನೂ ಮುರಿದಿದ್ದಾರೆ
Updated on: Oct 07, 2026 | 8:44 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6 ರಂದು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ, ನಾಯಕ ಶ್ರೇಯಸ್ ಅಯ್ಯರ್ ಪಂದ್ಯ ಗೆಲ್ಲುವ ಶತಕ ಗಳಿಸಿದರೆ, ಇಶಾನ್ ಕಿಶಾನ್ ಕೂಡ ಅಜೇಯ 37 ರನ್ ಬಾರಿಸಿದರು(PC-PTI).

ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಮೊದಲ ಶತಕವಾಗಿದ್ದರೆ, ಇತ್ತ ಅಜೇಯ 37 ರನ್ಗಳ ಇನ್ನಿಂಗ್ಸ್ ಆಡಿದ ಇಶಾನ್ ಕಿಶನ್, ವಿರಾಟ್ ಕೊಹ್ಲಿಯ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಈಗ ಇಶಾನ್ ಕಿಶಾನ್ ಟಿ20 ಸ್ವರೂಪದಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನೆಂಬ ದಾಖಲೆಗೆ ಕೊರಳೊಡ್ಡಿದ್ದಾರೆ(PC-PTI).

ವಾಸ್ತವವಾಗಿ ಅಂತರರಾಷ್ಟ್ರೀಯ ಟಿ20ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯನೆಂಬ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿತ್ತು. 2016 ರಲ್ಲಿ ಆಡಿದ 31 ಟಿ20 ಪಂದ್ಯಗಳ 29 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ನಾಲ್ಕು ಶತಕಗಳು ಮತ್ತು 14 ಅರ್ಧಶತಕಗಳು ಸೇರಿದಂತೆ 89.66 ಸರಾಸರಿಯಲ್ಲಿ 1,614 ರನ್ ಬಾರಿಸಿದ್ದರು(PC-PTI).

ಇದೀಗ 2026 ರಲ್ಲಿ ಇಶಾನ್ ಕಿಶನ್ ಆಡಿದ 45 ಟಿ20ಪಂದ್ಯಗಳ 45 ಇನ್ನಿಂಗ್ಸ್‌ಗಳಲ್ಲಿ 39.14 ಸರಾಸರಿಯಲ್ಲಿ 1,644 ರನ್ ಗಳಿಸುವ ಮೂಲಕ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಕಿಶಾನ್ ಈ ವರ್ಷ ಒಂದು ಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ(PC-PTI).

ಇದರ ಜೊತೆಗೆ ಕಿಶನ್, ಕ್ಯಾಲೆಂಡರ್ ವರ್ಷದ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಭಾರತೀಯ ಆಟಗಾರನೆಂಬ ದಾಖಲೆಯನ್ನು ಹೊಂದಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ ಕಿಶನ್ 167 ಬೌಂಡರಿಗಳನ್ನು ಬಾರಿಸಿದ್ದು, 2023 ರಲ್ಲಿ 165 ಬೌಂಡರಿಗಳನ್ನು ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಕಿಶನ್ ಹಿಂದಿಕ್ಕಿದ್ದಾರೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



