
ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ಆರಂಭ ಕಂಡಿದೆ. ಇದೀಗ ಟೀಂ ಇಂಡಿಯಾದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತನ್ನ ಆರಂಭಿಕ ಪಂದ್ಯವನ್ನು ಆಡಲು ಸಿದ್ಧವಾಗಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಆತಿಥೇಯ ಅಮೆರಿಕ ವಿರುದ್ಧ ಆಡಲಿದೆ.

ಆ ನಂತರ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ಹೈವೋಲ್ಟೇಜ್ ಮ್ಯಾಚ್ ನಡೆಯಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಲಾಭವಾಗಿದೆ.

ಅದೆನೆಂದರೆ.. ಈ ಉಭಯ ತಂಡಗಳ ಕದನಕ್ಕೂ ಮುನ್ನ ಪಾಕ್ ತಂಡ ತನ್ನ ವಾಸ್ತವ್ಯವನ್ನು ಬೇರೆಗೆ ಶಿಫ್ಟ್ ಮಾಡಿದೆ. ವಾಸ್ತವವಾಗಿ, ನಮ್ಮ ತಂಡ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗಲು 90 ನಿಮಿಷ ಬೇಕು ಎಂದು ಪಿಸಿಬಿ, ಐಸಿಸಿ ವಿರುದ್ಧ ದೂರಿತ್ತು.

ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೂರಿನ ನಂತರ ಐಸಿಸಿ ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ತಾನ ತಂಡದ ಹೋಟೆಲ್ ಅನ್ನು ಬದಲಾಯಿಸಿದೆ. ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಮಧ್ಯಸ್ಥಿಕೆಯ ನಂತರ, ಪಾಕಿಸ್ತಾನ ತಂಡವನ್ನು ಮೈದಾನದಿಂದ ಕೇವಲ ಐದು ನಿಮಿಷಗಳ ದೂರದಲ್ಲಿರುವ ಮತ್ತೊಂದು ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಪಾಕಿಸ್ತಾನವು ಭಾನುವಾರ ನ್ಯೂಯಾರ್ಕ್‌ನಲ್ಲಿ ಭಾರತವನ್ನು ಎದುರಿಸಬೇಕಾಗಿದೆ. ಆ ಬಳಿಕ ಜೂನ್ 11 ರಂದು ಕೆನಡಾವನ್ನು ಎದುರಿಸಲಿದೆ. ಆದರೆ ತಂಡದ ಹೋಟೆಲ್ಗೂ, ಕ್ರೀಡಾಂಗಣಕ್ಕೂ ಸಾಕಷ್ಟು ದೂರವಿದೆ. ಪ್ರಯಾಣವೇ ಆಟಗಾರರಿಗೆ ಪ್ರಯಾಸವಾಗುತ್ತಿದೆ ಎಂದು ಪಿಸಿಬಿ ದೂರಿತ್ತು.

ಪಿಸಿಬಿಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ಶ್ರೀಲಂಕಾ ಆಟಗಾರರು, ನಾವು ತಂಗಿರುವ ಹೋಟೆಲ್ಗೂ ಕ್ರೀಡಾಂಗಣಕ್ಕೂ ಸುಮಾರು 1 ಗಂಟೆ ಪ್ರಯಾಣ ಮಾಡಬೇಕಿದೆ. ಹೀಗಾಗಿ ಆಟಗಾರರು ಸಾಕಷ್ಟು ಸುಸ್ತಾಗುತ್ತಿದ್ದು, ಪಂದ್ಯದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪ ಹೊರಿಸಿದ್ದರು.