
T20 World Cup 2024: ಟಿ20 ವಿಶ್ವಕಪ್ನ 22ನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಕೆನಡಾ ಬ್ಯಾಟರ್ ಆರೋನ್ ಜಾನ್ಸನ್ (Aaron Johnson) ವಿಶೇಷ ದಾಖಲೆ ಬರೆದಿದ್ದಾರೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಕೆನಡಾ ತಂಡಕ್ಕೆ ಆರಂಭಿಕ ಆಟಗಾರ ಆರೋನ್ ಜಾನ್ಸನ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಜಾನ್ಸನ್ ಪಾಕ್ ಬೌಲರ್ಗಳ ಬೆಂಡೆತ್ತಿದರು.

ಆದರೆ ಮತ್ತೊಂದು ಬದಿಯಲ್ಲಿ ಜಾನ್ಸನ್ಗೆ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಒಂದೆಡೆ ಜಾನ್ಸನ್ ರನ್ಗಳಿಸುತ್ತಿದ್ದರೆ, ಮತ್ತೊಂದೆಡೆ ಕೆನಡಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಇದರಿಂದಾಗಿ ಪವರ್ಪ್ಲೇ ಬಳಿಕ ಆರೋನ್ ಜಾನ್ಸನ್ ರಕ್ಷಣಾತ್ಮಕ ಆಟಕ್ಕೆ ಮುಂದಾಗಬೇಕಾಯಿತು.

ಇದಾಗ್ಯೂ 38 ಎಸೆತಗಳಲ್ಲಿ ಅರ್ಧಶತಕ ಪೂರೈಸುವಲ್ಲಿ ಆರೋನ್ ಜಾನ್ಸನ್ ಯಶಸ್ವಿಯಾದರು. ಅಲ್ಲದೆ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ ಬಾರಿಸಿ ನಸೀಮ್ ಶಾ ಎಸೆತದಲ್ಲಿ ಬೌಲ್ಡ್ ಆದರು.

ಈ ಅರ್ಧಶತಕದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೆನಡಾ ಪರ ಅತ್ಯಧಿಕ ಬಾರಿ 50+ ಸ್ಕೋರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಆರೋನ್ ಜಾನ್ಸನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನವನೀತ್ ಧಲಿವಾಲ್ (7 ಬಾರಿ) ಹೆಸರಿನಲ್ಲಿತ್ತು. ಇದೀಗ 8ನೇ ಬಾರಿ 50+ ಸ್ಕೋರ್ಗಳಿಸುವ ಮೂಲಕ ಆರೋನ್ ಜಾನ್ಸನ್ ಕೆನಡಾ ಪರ ಹೊಸ ಇತಿಹಾಸ ಬರೆದಿದ್ದಾರೆ.

ಇನ್ನು ಆರೋನ್ ಜಾನ್ಸನ್ ಅವರ ಈ ಅರ್ಧಶತಕದ ನೆರವಿನಿಂದ ಕೆನಡಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿದೆ. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ 107 ರನ್ಗಳ ಗುರಿ ನೀಡಿದೆ.