ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 9ನೇ ಪಂದ್ಯದಲ್ಲಿ ಉಗಾಂಡ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ (Franco Nsubuga) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ 4 ಓವರ್ಗಳಲ್ಲಿ ಕೇವಲ 4 ರನ್ ನೀಡುವ ಮೂಲಕ ಎಂಬುದು ವಿಶೇಷ.
ಪಪುವಾ ನ್ಯೂ ಗಿನಿಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಉಗಾಂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಅದರಲ್ಲೂ 43 ವರ್ಷದ ಹಿರಿಯ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ ಸ್ಪಿನ್ ಮೋಡಿಯೊಂದಿಗೆ ಪಪುವಾ ನ್ಯೂ ಗಿನಿಯಾ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು.
ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಫ್ರಾಂಕ್ ನ್ಸುಬುಗಾ 2 ಮೇಡನ್ ಓವರ್ ಜೊತೆಗೆ ಕೇವಲ 4 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಕಡಿಮೆ ರನ್ ನೀಡಿ 4 ಓವರ್ಗಳನ್ನು ಪೂರೈಸಿದ ವಿಶ್ವ ದಾಖಲೆ ಫ್ರಾಂಕ್ ನ್ಸುಬುಗಾ ಪಾಲಾಯಿತು.
ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ವೇಗಿ ಅನ್ರಿಕ್ ನೋಕಿಯಾ ಹೆಸರಿನಲ್ಲಿತ್ತು. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 4 ಓವರ್ಗಳಲ್ಲಿ ಕೇವಲ 7 ರನ್ ನೀಡುವ ಮೂಲಕ ನೋಕಿಯಾ ಈ ದಾಖಲೆ ಬರೆದಿದ್ದರು.
ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಉಗಾಂಡ ಬೌಲರ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಕಡಿಮೆ ರನ್ ನೀಡಿ 4 ಓವರ್ಗಳನ್ನು ಪೂರೈಸಿದ ವಿಶ್ವ ದಾಖಲೆಯನ್ನು ಫ್ರಾಂಕ್ ನ್ಸುಬುಗಾ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂ ಗಿನಿಯಾ ತಂಡವು 19.1 ಓವರ್ಗಳಲ್ಲಿ 77 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಉಗಾಂಡ ತಂಡವು 7 ವಿಕೆಟ್ ಕಳೆದುಕೊಂಡು 18.2 ಓವರ್ಗಳಲ್ಲಿ ಗುರಿ ಮುಟ್ಟಿದೆ. ಈ ಮೂಲಕ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.