
T20 World Cup 2024: ಈ ಬಾರಿಯ ಐಪಿಎಲ್ನಲ್ಲಿ ಸೊನ್ನೆ ಸುತ್ತುವ ಮೂಲಕವೇ ಸುದ್ದಿಯಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಸೊನ್ನೆ ಸುತ್ತುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ.

ಬಾರ್ಬಡೋಸ್ನಲ್ಲಿ ನಡೆದ ಒಮಾನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಟಿ20 ವಿಶ್ವಕಪ್ 2024 ಅನ್ನು ಮ್ಯಾಕ್ಸಿ ಶೂನ್ಯದೊಂದಿಗೆ ಶುರು ಮಾಡಿದ್ದಾರೆ.

ಇದಕ್ಕೂ ಮುನ್ನ ಐಪಿಎಲ್ನಲ್ಲಿ ಸೊನ್ನೆಗಳ ಮೂಲಕ ಮ್ಯಾಕ್ಸ್ವೆಲ್ ಪೆವಿಲಿಯನ್ ಪರೇಡ್ ನಡೆಸಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು ಎಂದರೆ ನಂಬಲೇಬೇಕು.

ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕೊಡುಗೆ ಕೇವಲ 52 ರನ್ಗಳು ಮಾತ್ರ. ಅಂದರೆ 10 ಪಂದ್ಯಗಳಲ್ಲಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಮ್ಯಾಕ್ಸ್ವೆಲ್ ಅವರ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿದ್ದವು.

ಇದೀಗ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದಿರುವ ಗ್ಲೆನ್ ಮ್ಯಾಕ್ಸ್ವೆಲ್ ಅಲ್ಲೂ ಕೂಡ ಸೊನ್ನೆಯಾಟ ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ಒಮಾನ್ನಂತಹ ತಂಡದ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಹಿಂದಿನ ಚಾಳಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಕಳಪೆ ಪ್ರದರ್ಶನ ನೀಡಿದರೆ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳುವುದು ಖಚಿತ ಎನ್ನಬಹುದು.