
2024ರ ಟಿ20 ವಿಶ್ವಕಪ್‌ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಬ್ಯಾಟ್ ಇಲ್ಲಿಯವರೆಗೆ ಸದ್ದು ಮಾಡಿಲ್ಲ. ಐಪಿಎಲ್ನಲ್ಲಿ ಆರಂಭಿಕನಾಗಿ ರನ್ ಮಳೆ ಹರಿಸಿದ್ದ ಕೊಹ್ಲಿಗೆ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಅರಂಭಿಸುತ್ತಿರುವ ವಿರಾಟ್ ಕೊಹ್ಲಿ ಮೊದಲ ಮೂರು ಪಂದ್ಯಗಳಲ್ಲಿ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ.

ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 1 ರನ್ಗೆ ಸುಸ್ತಾಗಿದ್ದ ಕೊಹ್ಲಿ, 2ನೇ ಪಂದ್ಯದಲ್ಲಿ 4 ರನ್ ಬಾರಿಸಿದ್ದರು. ಮೂರನೇ ಪಂದ್ಯದಲ್ಲಿ ಕೊಹ್ಲಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಹೀಗಾಗಿ ಕೊಹ್ಲಿಯನ್ನು ಆರಂಭಿಕನಾಗಿ ಕಣಕ್ಕಿಳಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಆದರೆ ಅಚ್ಚರಿಯೆಂಬಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಕಷ್ಟದ ಅವಧಿಯಲ್ಲಿ ವಿರಾಟ್ ಅವರನ್ನು ಬೆಂಬಲಿಸಿದ್ದಾರೆ. ಜನರು ವಿರಾಟ್ ಕೊಹ್ಲಿ ಮೇಲೆ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕೊಹ್ಲಿ ಫಾರ್ಮ್ ಕುರಿತು ಮಾತನಾಡಿದ ಸುನೀಲ್ ಗವಾಸ್ಕರ್, ‘ನೀವು ಸತತ ಮೂರು ಪಂದ್ಯಗಳಲ್ಲಿ ಕಡಿಮೆ ಸ್ಕೋರ್‌ಗೆ ಇನ್ನಿಂಗ್ಸ್ ಮುಗಿಸಿದರೆ, ನೀವು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂದು ಅರ್ಥವಲ್ಲ.

ಕೆಲವೊಮ್ಮೆ ಉತ್ತಮ ಚೆಂಡುಗಳಿಗೆ ನೀವು ವಿಕೆಟ್ ಒಪ್ಪಿಸಬೇಕಾಗುತ್ತದೆ. ಆದರೆ ಬೇರೆ ಯಾವುದೇ ದಿನದಲ್ಲಿ ಅದೇ ಚೆಂಡು ವೈಡ್ ಆಗಿರಬಹುದು ಅಥವಾ ಸ್ಲಿಪ್ ಮೇಲೆ ಬೌಂಡರಿಗೆ ಹೋಗಬಹುದು. ಹೀಗಾಗಿ ಕೊಹ್ಲಿ ಮೇಲೆ ವಿಶ್ವಾಸ ತೋರಿಸಬೇಕು. ಇವತ್ತಲ್ಲ ನಾಳೆ ಕೊಹ್ಲಿ ಮತ್ತೆ ತಮ್ಮ ಅದ್ಭುತ ಪಾರ್ಮ್ಗೆ ಮರಳುತ್ತಾರೆ ಎಂದು ನಂಬಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಗವಾಸ್ಕರ್, ‘ಯಾವುದೇ ಆಟಗಾರನಿಗೆ ತಂಡಕ್ಕಾಗಿ ಪಂದ್ಯವನ್ನು ಗೆಲ್ಲುವುದು ದೊಡ್ಡ ಪ್ರೇರಣೆಯಾಗಿದೆ. ವಿಶೇಷವಾಗಿ ನೀವು ನಿಮ್ಮ ದೇಶಕ್ಕಾಗಿ ಆಡುವಾಗ. ಕೊಹ್ಲಿ ಹಲವು ವರ್ಷಗಳಿಂದ ಟೀಂ ಇಂಡಿಯಾ ಪರ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ತಂಡವನ್ನು ಅನೇಕ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸಿದ್ದಾರೆ.

ಕೊಹ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ಇನ್ನೂ ಪಂದ್ಯಾವಳಿಯ ಆರಂಭಿಕ ಹಂತದಲ್ಲಿದ್ದೇವೆ. ಸೂಪರ್-8 ಪಂದ್ಯಗಳನ್ನು ಆಡಬೇಕಾಗಿದೆ, ನಂತರ ಸೆಮಿ-ಫೈನಲ್ ಮತ್ತು ಫೈನಲ್ ಆಡಬೇಕಿದೆ. ಹೀಗಾಗಿ ಕೊಹ್ಲಿ ಮೇಲೆ ನಂಬಿಕೆ ಇಡಬೇಕು. ಇದು ಕೊಹ್ಲಿಯ ಆತ್ಮಸ್ಥೈರ್ಯ ಹೆಚ್ಚಲು ಸಹಕಾರಿಯಾಗುತ್ತದೆ ಎಂದಿದ್ದಾರೆ.