
9ನೇ ಆವೃತ್ತಿಯ ಟಿ20 ವಿಶ್ವಕಪ್ ಇದೇ ಜೂನ್ ತಿಂಗಳಿಂದ ಆರಂಭವಾಗುತ್ತಿದೆ. ಈ ಟೂರ್ನಿಗೆ ಈಗಾಗಲೇ ಟೀಂ ಇಂಡಿಯಾವನ್ನೂ ಪ್ರಕಟಿಸಲಾಗಿದೆ. ಈ ಟೂರ್ನಿಗಾಗಿ ಭಾರತ ತಂಡ ಶೀಘ್ರದಲ್ಲೇ ಅಮೆರಿಕಕ್ಕೆ ಎರಡು ತಂಡಗಳಾಗಿ ತೆರಳಲಿದೆ ಎಂಬ ಮಾಹಿತಿ ಇದೆ.

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಟೀಂ ಇಂಡಿಯಾ ಹೊರತಾಗಿ ಐರ್ಲೆಂಡ್, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ತಂಡಗಳು ಎದುರಿಸಲಿವೆ. ಈ ನಾಲ್ಕು ತಂಡಗಳು ಭಾರತದ ವಿರುದ್ಧ ಸೆಣಸಲಿವೆ.

ಸದ್ಯದ ವೇಳಾಪಟ್ಟಿಯಂತೆ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಜೂನ್ 09 ರಂದು ಪಾಕಿಸ್ತಾನ ವಿರುದ್ಧ, ಜೂನ್ 12 ರಂದು ಅಮೆರಿಕ ವಿರುದ್ಧ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.

ಟೀಂ ಇಂಡಿಯಾ ಮೊದಲ ಬಾರಿಗೆ ಅಮೆರಿಕ ಮತ್ತು ಕೆನಡಾ ವಿರುದ್ಧ ಟಿ20 ಪಂದ್ಯವನ್ನಾಡಲಿದೆ. ಟೀಂ ಇಂಡಿಯಾ ವಿರುದ್ಧ ಆಡಲಿರುವ ಈ ಎರಡೂ ತಂಡಗಳಲ್ಲಿ ಕೆಲವು ಭಾರತೀಯ ಆಟಗಾರರೂ ಇದ್ದಾರೆ ಎಂಬುದು ಈ ಪಂದ್ಯದ ವಿಶೇಷ. ಅಂತಹ ಐವರು ಆಟಗಾರರ ವಿವರ ಇಲ್ಲಿದೆ.

ಜೂನ್ 12 ರಂದು ಭಾರತ, ಅಮೇರಿಕಾ ವಿರುದ್ಧ ಪಂದ್ಯವನ್ನಾಡಲಿದೆ. ಆ ಪಂದ್ಯದಲ್ಲಿ ಅಮೇರಿಕಾ ಪರ ನಾಲ್ವರು ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಒಬ್ಬರು ಮಿಲಿಂದ್ ಕುಮಾರ್. ಮಿಲಿಂದ್ ಕುಮಾರ್ ದೆಹಲಿ ಮತ್ತು ಸಿಕ್ಕಿಂ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ದೆಹಲಿ ಮತ್ತು ಆರ್‌ಸಿಬಿ ಪರ ಆಡಿದ್ದಾರೆ. ಆದರೀಗ 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಯುಎಸ್‌ಎ ಪರ ಆಡಲಿದ್ದಾರೆ.

ಈ ತಂಡದಲ್ಲಿ ಮಿಲಿಂದ್ ಕುಮಾರ್ ಹೊರತಾಗಿ ಹರ್ಮೀತ್ ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ. ಹರ್ಮೀತ್ ಸಿಂಗ್ 2012 ರಲ್ಲಿ ಅಂಡರ್19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಮತ್ತು ತ್ರಿಪುರಾ ಪರ ಆಡಿದ್ದರು.

ಈ ಇಬ್ಬರು ಆಟಗಾರರಲ್ಲದೆ, ಅಮೆರಿಕ ತಂಡದಲ್ಲಿ ಮೊನಾಂಕ್ ಪಟೇಲ್ ಮತ್ತು ಸೌರಭ್ ನೇತ್ರವಾಲ್ಕರ್ ಕೂಡ ಇದ್ದಾರೆ. ಈ ಇಬ್ಬರೂ ಆಟಗಾರರು ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಮೊನಾಂಕ್ ಪಟೇಲ್ ಗುಜರಾತ್ ಪರ ಅಂಡರ್ 16 ಮತ್ತು ಅಂಡರ್ 18 ತಂಡದಲ್ಲಿ ಆಡಿದ್ದರು. ಆದರೆ ಆ ಬಳಿಕ 2016 ರಲ್ಲಿ ಅಮೇರಿಕಾಗೆ ತೆರಳಿದರು. ಇದೀಗ ಅವರು 2024 ರಟಿ 20 ವಿಶ್ವಕಪ್‌ನಲ್ಲಿ ಯುಎಸ್ಎ ತಂಡವನ್ನು ಮುನ್ನಡೆಸಲಿದ್ದಾರೆ.

ಸೌರಭ್ ನೇತ್ರವಾಲ್ಕರ್ ಕೂಡ 2010ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ಆಡಿದ್ದರು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದರು. ಇದೀಗ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಅಮೆರಿಕ ಪರ ಆಡಲಿದ್ದಾರೆ.

ಮತ್ತೊಂದೆಡೆ, ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ ಪರ್ಗತ್ ಸಿಂಗ್, ಇದೀಗ ಕೆನಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪರ್ಗತ್ ಸಿಂಗ್ ಅವರು 2015-16 ರಲ್ಲಿ ಪಂಜಾಬ್ ಪರ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಈಗ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಕೆನಡಾ ಪರ ಆಡಲಿದ್ದಾರೆ.