2021ರಲ್ಲಿ ರವಿಶಾಸ್ತ್ರಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ದ್ರಾವಿಡ್ ಆಯ್ಕೆಯಿಂದಾಗಿ ಟೀಂ ಇಂಡಿಯಾದ ಐಸಿಸಿ ಟ್ರೋಫಿಯ ಬರ ನೀಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ವಾಸ್ತವವಾಗಿ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಅಂಡರ್ 19 ವಿಶ್ವಕಪ್ ಗೆದ್ದಿತ್ತು. ಹೀಗಾಗಿ ದ್ರಾವಿಡ್ ಮೇಲೆ ಭಾರಿ ಭರವಸೆ ಇಟ್ಟು ಬಿಸಿಸಿಐ, ದ್ರಾವಿಡ್ಗೆ ಕೋಚ್ ಹುದ್ದೆ ನೀಡಿತ್ತು. ಆದರೆ ದ್ರಾವಿಡ್ ಸಾರಥ್ಯದಲ್ಲಿ ಟೀಂ ಇಂಡಿಯಾ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿ ಫೈನಲ್ನಿಂದಲೇ ಹೊರಬಿದ್ದರೆ, ಇದೀಗ ಡಬ್ಲ್ಯುಟಿಸಿ ಫೈನಲ್ನಲ್ಲೂ ಮುಗ್ಗರಿಸಿತು.
ಹೀಗಾಗಿ ಟೀಂ ಇಂಡಿಯಾದಲ್ಲಿ ಮುಖ್ಯ ಕೋಚ್ ಬದಲಾವಣೆಯ ಕೂಗು ಕೇಳಿಬರಲಾರಂಭಿಸಿದೆ. ಆದರೆ ಸದ್ಯಕ್ಕೆ ಅಂದರೆ, ಏಕದಿನ ವಿಶ್ವಕಪ್ ಮುಗಿಯುವವರೆಗೆ ದ್ರಾವಿಡ್ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಗಳಿಲ್ಲ. ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದರೆ, ಆ ನಂತರವೂ ದ್ರಾವಿಡ್ ಕೋಚ್ ಆಗಿ ಮುಂದುವರೆಯಬಹುದಾಗಿದೆ. ಒಂದು ವೇಳೆ ಸೋತರೆ, ದ್ರಾವಿಡ್ ಸ್ಥಾನಕ್ಕೆ ಕುತ್ತು ಬರುವುದು ಗ್ಯಾರಂಟಿ.
ಹೀಗಾಗಿ ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಸ್ಥಾನವನ್ನು ತುಂಬಬಲ್ಲ ಮುಖ್ಯ ಕೋಚ್ಗಳನ್ನು ನೋಡುವುದಾದರೆ, ಪ್ರಮುಖವಾಗಿ 5 ಮಾಜಿ ಕ್ರಿಕೆಟಿಗರು ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅವುರಗಳು ಯಾರ್ಯಾರು ಎಂಬುದರ ವಿವರ ಇಲ್ಲಿದೆ.
ಆಶಿಶ್ ನೆಹ್ರಾ: ಟೀಂ ಇಂಡಿಯಾದ ದಿಗ್ಗಜ ಬೌಲರ್ ಆಶಿಶ್ ನೆಹ್ರಾ ಸದ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪ್ರಸ್ತುತ ಮುಖ್ಯ ಕೋಚ್ ಆಗಿದ್ದಾರೆ. ಅವರ ಕೋಚಿಂಗ್ನಲ್ಲಿ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಆಡಿದೆ. ಇದರಲ್ಲಿ ಒಂದರಲ್ಲಿ ಗೆದ್ದಿದ್ದರೆ, ಇನ್ನೊಂದರಲ್ಲಿ ಸೋತಿದೆ. ಆದರೆ ಸೋತ ಪಂದ್ಯದಲ್ಲೂ ಗುಜರಾತ್ ತಂಡ ಗೆಲುವಿಗಾಗಿ ನೀಡಿದ ಹೋರಾಟ ಅಷ್ಟಿಷ್ಟಲ್ಲ. ಹೀಗಾಗಿ ಐಪಿಎಲ್‌ನಲ್ಲಿ ಒಂದೊಳ್ಳೆ ತಂಡವನ್ನು ಬೆಳೆಸಿರುವ ನೆಹ್ರಾ ಟೀಂ ಇಂಡಿಯಾ ಕೋಚ್ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದಾರೆ.
ಜಸ್ಟಿನ್ ಲ್ಯಾಂಗರ್: ಈ ಹಿಂದೆ ಆಸೀಸ್ ತಂಡವನ್ನು 2021ರ ಟಿ20 ವಿಶ್ವಕಪ್ ಹಾಗೂ 2021-22 ಆಶಸ್ ಸರಣಿಯ ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದ ಜಸ್ಟಿನ್ ಲ್ಯಾಂಗರ್ ಕೂಡ ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಸ್ಟೀಫನ್ ಫ್ಲೆಮಿಂಗ್: ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಆರಂಭಿಕ ಬ್ಯಾಟರ್ ಸ್ಟೀಫನ್ ಫ್ಲೆಮಿಂಗ್ ಸದ್ಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ತರಬೇತುದಾರರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಅವರು ಮುಖ್ಯ ಕೋಚ್ ಆಗಿ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದ ಏಕೈಕ ಆಟಗಾರರಾಗಿದ್ದಾರೆ. ಹೀಗಾಗಿ ಅವರು ಕೂಡ ಟೀಂ ಇಂಡಿಯಾಕ್ಕೆ ಒಂದೊಳ್ಳೆ ಕೋಚ್ ಆಗಬಹುದು.
ಗೌತಮ್ ಗಂಭೀರ್: ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಮೆಂಟರ್ ಆಗಿದ್ದಾರೆ. ಆದರೆ ಗಂಭೀರ್ಗೆ ಇತರರಂತೆ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ ಅನುಭವವಿಲ್ಲ. ಆದರೆ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಎಲ್ಲ ರೀತಿಯಲ್ಲೂ ಸಮರ್ಥರಾಗಿದ್ದಾರೆ.
ರಿಕಿ ಪಾಂಟಿಂಗ್: ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡದ ಆಟಗಾರನಾಗಿ ಅತಿ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಮುಖ್ಯ ತರಬೇತುದಾರರಾಗಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಸದ್ಯ ಡೆಲ್ಲಿ ತಂಡದಿಂದ ಪಾಂಟಿಂಗ್ ಹೊರಬೀಳುವ ಸಾಧ್ಯತೆಗಳಿದ್ದು, ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಪಾಂಟಿಂಗ್ ಕೂಡ ಅರ್ಹ ಆಯ್ಕೆಯಾಗಿದ್ದಾರೆ.