
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ಗೇರುವ ದೃಷ್ಟಿಯಿಂದ ಈ ಸರಣಿಯು ಟೀಂ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಗೆಲ್ಲಲೇಬೇಕಾದ ಒತ್ತಡ ತಂಡದ ಮೇಲಿದೆ.

ಸರಣಿಯ ಮೊದಲ ಪಂದ್ಯ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಟೆನ್ಷನ್ ಹೆಚ್ಚಾಗಿದ್ದು, ತಂಡದ ನಾಲ್ವರು ಆಟಗಾರರು ಇಂಜುರಿಯಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ ನಾಯಕ ರೋಹಿತ್ ಶರ್ಮಾ ಆಡುವ ಬಗ್ಗೆ ಈಗಾಗಲೇ ಸಸ್ಪೆನ್ಸ್ ಇದ್ದು, ಇದೀಗ ಆಯ್ಕೆ ಮಂಡಳಿಗೆ ಹೊಸ ತಲೆನೋವು ಶುರುವಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಪರ್ತ್‌ನಲ್ಲಿ ನಡೆದ ಭಾರತ ಎ ವಿರುದ್ಧದ ಪಂದ್ಯದ ವೇಳೆ ಸ್ಲಿಪ್ ಕ್ಯಾಚ್ ತೆಗೆದುಕೊಳ್ಳುವಾಗ ಗಿಲ್ ಅವರ ಬೆರಳಿಗೆ ಗಾಯವಾಗಿದೆ. ಈ ಗಾಯವೂ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಅವರು ಪರ್ತ್ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿಲ್ಲ. ವೈದ್ಯಕೀಯ ತಂಡ ಅವರ ಮೇಲೆ ತೀವ್ರ ನಿಗಾ ಇರಿಸಿದ್ದು, ಮೊದಲ ಪಂದ್ಯದ ಭಾಗವಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು.

ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರ ಇಂಜುರಿಯ ಸರಣಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವೆಂಬರ್ 14 ರಂದು WACA ನಲ್ಲಿ ಭಾರತದ ಅಭ್ಯಾಸದ ವೇಳೆ ಬ್ಯಾಟಿಂಗ್ ಮಾಡುವಾಗ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ಆರಂಭದಲ್ಲಿ ಅವರು ತುಂಬಾ ನೋವಿನಿಂದ ನರಳಿದರಾದರೂ, ಅವರ ಗಾಯವು ತುಂಬಾ ಗಂಭೀರವಾಗಿರಲಿಲ್ಲ ಎಂದು ವರದಿಯಾಗಿತ್ತು.

ಇದೇ ಅಭ್ಯಾಸದ ವೇಳೆ ಕೆಎಲ್ ರಾಹುಲ್ ಕೂಡ ಗಾಯಗೊಂಡಿದ್ದರು. ನವೆಂಬರ್ 15 ರಂದು ಸೆಂಟರ್ ವಿಕೆಟ್ ಮ್ಯಾಚ್ ಸಿಮ್ಯುಲೇಶನ್ ಸಮಯದಲ್ಲಿ ರಾಹುಲ್ ಬಲ ಮೊಣಕೈಗೆ ಗಾಯವಾಯಿತು. ತುಂಬಾ ನೋವಿನಿಂದ ನರಳುತ್ತಿದ್ದ ರಾಹುಲ್, ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಡಗೌಟ್ಗೆ ತೆರಳಿದ್ದರು.

ಈ ಮೂವರಿಗೂ ಮುನ್ನ ವಿರಾಟ್ ಕೊಹ್ಲಿ ಕೂಡ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರ ಗಾಯದ ಸ್ಕ್ಯಾನ್ ವರದಿ ಹೊರಬಿದ್ದ ಬಳಿಕ ಆಯ್ಕೆಗಾರರು ನಿರಾಳರಾಗಿದ್ದು, ಕೊಹ್ಲಿಗೆ ಗಂಭೀರ ಗಾಯವಾಗಿಲ್ಲ ಎಂಬುದು ಕಂಡುಬಂದಿದೆ.

ಇವರುಗಳ ಜೊತೆಗೆ ಭಾರತದ ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನ ಭಾಗವಾಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಹಿತ್ ಆಡದಿದ್ದಲ್ಲಿ ಕೆಎಲ್ ರಾಹುಲ್ ಓಪನಿಂಗ್ ಜವಾಬ್ದಾರಿ ಪಡೆಯಬಹುದು. ಶುಭ್ಮನ್ ಗಿಲ್ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಇಬ್ಬರೂ ಆಟಗಾರರು ತಂಡಕ್ಕೆ ಅವಶ್ಯಕವಾಗಿದ್ದು, ಇವರು ಇಂಜುರಿಯಿಂದ ಬೇಗ ಗುಣಮುಖರಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.