
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕಟಕ್ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಶುಭ್ ಮನ್ ಗಿಲ್ 4 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಅಭಿಷೇಕ್ ಶರ್ಮಾ 17 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಆ ಬಳಿಕ ಬಂದ ತಿಲಕ್ ವರ್ಮಾ 26 ರನ್ ಗಳಿಸಿದರೆ, ಅಕ್ಷರ್ ಪಟೇಲ್ 23 ರನ್ ಬಾರಿಸಿದರು.

ಇನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪಾಂಡ್ಯ ಬ್ಯಾಟ್ ನಿಂದ 28 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್, 6 ಫೋರ್ ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.

ಕುತೂಹಲಕಾರಿ ವಿಷಯ ಎಂದರೆ ಭಾರತ ಪೇರಿಸಿದ ಈ 175 ರನ್ ಗಳ ನಡುವೆ ಒಂದೇ ಒಂದು ಅರ್ಧಶತಕದ ಜೊತೆಯಾಟ ಮೂಡಿಬಂದಿಲ್ಲ. ಅಲ್ಲದೇ ಯಾವುದೇ ಬ್ಯಾಟರ್ ಗಳು 40 ರನ್ ಗಳ ಪಾಲುದಾರಿಕೆಯನ್ನು ಸಹ ಪ್ರದರ್ಶಿಸಿಲ್ಲ. ಹೀಗೆ ಉತ್ತಮ ಜೊತೆಯಾಟದ ಹೊರತಾಗಿಯೂ ಅತ್ಯಧಿಕ ರನ್ ಪೇರಿಸಿದ ವಿಶ್ವದ 2ನೇ ತಂಡ ಎಂಬ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ.

ಈ ವಿಶ್ವ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನ್ಯೂಝಿಲೆಂಡ್. 2019 ರಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಅರ್ಧಶತಕದ ಜೊತೆಯಾಟದ ಹೊರತಾಗಿಯೂ ನ್ಯೂಝಿಲೆಂಡ್ ಬರೋಬ್ಬರಿ 176 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದೀಗ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ ಗಳು ಅರ್ಧಶತಕದ ಜೊತೆಯಾಟದ ಹೊರತಾಗಿಯೂ 175 ರನ್ ಕಲೆಹಾಕಿದ್ದಾರೆ. ಒಂದು ವೇಳೆ 176 ರನ್ ಬಾರಿಸಿದ್ದರೆ ಭಾರತ ತಂಡದ ಹೆಸರಿಗೆ ವಿಶ್ವ ದಾಖಲೆ ಸೇರ್ಪಡೆಯಾಗುತ್ತಿತ್ತು. ಆದರೆ ಕೇವಲ ಒಂದು ರನ್ ನಿಂದ ಟೀಮ್ ಇಂಡಿಯಾ ಭರ್ಜರಿ ದಾಖಲೆ ಬರೆಯುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.