
ಭಾರತ ತಂಡ (Team India) ಈವರೆಗೆ 261 ಟಿ೨೦ ಪಂದ್ಯಗಳನ್ನಾಡಿದೆ. ಈ 261 ಮ್ಯಾಚ್ ಗಳಲ್ಲಿ 173 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತ 173 ಮ್ಯಾಚ್ ಗಳನ್ನು ಜಯಿಸಿದರೂ ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಇತಿಹಾಸವಿಲ್ಲ ಎಂದರೆ ನಂಬಲೇಬೇಕು.

ಮುಲ್ಲನ್ಪುರ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 51 ರನ್ ಗಳ ಸೋಲನುಭವಿಸಿತು. ಅಂದರೆ ಸೌತ್ ಆಫ್ರಿಕಾ ನೀಡಿದ 214 ರನ್ ಗಳ ಟಾರ್ಗೆಟ್ ಅನ್ನು ಬೆನ್ನತ್ತಿ ಟೀಮ್ ಇಂಡಿಯಾ ಗಳಿಸಿರುವುದು ಕೇವಲ 161 ರನ್ ಗಳು ಮಾತ್ರ.

ಅಂದರೆ ಬೃಹತ್ ಮೊತ್ತವನ್ನು ಚೇಸ್ ಮಾಡುವಲ್ಲಿ ಟೀಮ್ ಇಂಡಿಯಾ ಮತ್ತೆ ಮತ್ತೆ ಎಡವುತ್ತಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು. ಭಾರತ ತಂಡವು 261 ಮ್ಯಾಚ್ ಗಳಲ್ಲಿ 7 ಬಾರಿ 210 ಕ್ಕಿಂತ ಹೆಚ್ಚು ರನ್ ಬಿಟ್ಟು ಕೊಟ್ಟಿದೆ. ಈ 7 ಮ್ಯಾಚ್ ಗಳಲ್ಲೂ ಟೀಮ್ ಇಂಡಿಯಾ ಸೋತಿದೆ.

ಭಾರತದ ವಿರುದ್ಧ 210 ಕ್ಕಿಂತ ಅಧಿಕ ಸ್ಕೋರ್ ಗಳಿಸಿದರೆ ಎದುರಾಳಿ ಪಡೆಯ ಗೆಲುವು ಖಚಿತ. ಈ ಒಂದು ಸಿಕ್ರೇಟ್ ಮುಂಬರುವ ಟಿ೨೦ ವಿಶ್ವಕಪ್‌ನಲ್ಲೂ ಎದುರಾಳಿಗಳು ಅನ್ವಯಿಸುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಟಿ೨೦ ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಇತ್ತ ಭಾರತದ ಪಿಚ್ ಬ್ಯಾಟಿಂಗ್ಗೆ ಸಹಕಾರಿ. ಹೀಗಾಗಿ ಎದುರಾಳಿ ತಂಡಗಳು ಟೀಮ್ ಇಂಡಿಯಾ ವಿರುದ್ಧ 210 ಕ್ಕಿಂತ ಹೆಚ್ಚಿನ ಮೊತ್ತ ಪೇರಿಸುವ ಧ್ಯೇಯದೊಂದಿಗೆ ಕಣಕ್ಕಿಳಿಯಲಿದೆ.

ಅದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ 210+ ರನ್ ಗಳ ಚೇಸಿಂಗ್ ವೈಫಲ್ಯವನ್ನು ಸರಿಪಡಿಸಬೇಕಿದೆ. ಒತ್ತಡವನ್ನು ಮೆಟ್ಟಿ ನಿಂತು ಭಾರತೀಯ ಬ್ಯಾಟರ್ ಗಳು ಬೃಹತ್ ಮೊತ್ತವನ್ನು ಚೇಸ್ ಮಾಡುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಎದುರಾಳಿ ತಂಡ 210+ ರನ್ ಗಳಿಸಿದರೆ ಟೀಮ್ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ.