
ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ತಂಡಗಳ ವಾರ್ಷಿಕ ಶ್ರೇಯಾಂಕದಲ್ಲಿ ಹಲವು ದಿನಗಳಿಂದ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದ ಟೀಂ ಇಂಡಿಯಾ ಇದೀಗ ತನ್ನ ನಂಬರ್ 1 ಸ್ಥಾನದಿಂದ ಕೆಳಗಿಳಿದಿದೆ. ಟೀಂ ಇಂಡಿಯಾವನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ.

124 ರೇಟಿಂಗ್ ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ನೂತನ ಟೆಸ್ಟ್ ತಂಡಗಳ ರ‍್ಯಾಂಕಿಂಗ್‌ನಲ್ಲಿ ಪ್ರಸ್ತುತ ಅಗ್ರಸ್ಥಾನಕ್ಕೇರಿದೆ.

ಮೊದಲ ಸ್ಥಾನದಿಂದ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿರುವ ಟೀಂ ಇಂಡಿಯಾ 120 ರೇಟಿಂಗ್ ಪಾಯಿಂಟ್ಸ್ ಹೊಂದಿದೆ. ಉಭಯ ತಂಡಗಳ ರೇಟಿಂಗ್ ಪಾಯಿಂಟ್ಸ್ ನಡುವೆ 4 ಅಂಕಗಳ ವ್ಯತ್ಯಾಸವಿದೆ.

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯನ್ನು ಭಾರತ ತಂಡ 4-1 ರ ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿತ್ತು.

ಆದರೆ ಇದೀಗ ಮತ್ತೊಮ್ಮೆ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನವನ್ನು ವಶಪಡಿಸಿಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ 109 ರೇಟಿಂಗ್ ಪಾಯಿಂಟ್ಸ್ಗಳನ್ನು ತನ್ನದಾಗಿಸಿಕೊಂಡಿದೆ.

103 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ 4ನೇ ಸ್ಥಾನದಲ್ಲಿದ್ದರೆ, 96 ರೇಟಿಂಗ್ ಪಾಯಿಂಟ್ಸ್ಗಳೊಂದಿಗೆ ನ್ಯೂಜಿಲೆಂಡ್ ತಂಡ 5ನೇ ಸ್ಥಾನದಲ್ಲಿದೆ. ಇನ್ನು 6 ನೇ ಸ್ಥಾನದಲ್ಲಿರುವ ಪಾಕಿಸ್ತಾನ 89 ರೇಟಿಂಗ್ ಪಾಯಿಂಟ್ಸ್ ಹೊಂದಿದೆ.