
ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮುಗ್ಗರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದ್ದ ಟೀಮ್ ಇಂಡಿಯಾ, ಪುಣೆ, ಮುಂಬೈ ಟೆಸ್ಟ್ ಪಂದ್ಯಗಳಲ್ಲೂ ಪರಾಜಯಗೊಂಡಿದೆ. ಈ ಮೂರು ಸೋಲುಗಳೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ ಕೂಡ ಉಲ್ಪಾ ಪಲ್ಟಾ ಆಗಿದೆ.

ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾಗೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಅವಕಾಶವಿತ್ತು. ಆದರೀಗ ಭಾರತ ತಂಡವು ಮೂರು ಪಂದ್ಯಗಳಲ್ಲೂ ಸೋಲುಂಡು WTC ಪಾಯಿಂಟ್ಸ್ ಟೇಬಲ್ನಲ್ಲಿ 15.91 ಪರ್ಸಂಟೇಜ್ ಅಂಕಗಳನ್ನು ಕಳೆದುಕೊಂಡಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

ಇದಾಗ್ಯೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ. ಭಾರತ ತಂಡವು ಮುಂದಿನ ಐದು ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ ಫೈನಲ್ಗೇರುವ ಅವಕಾಶ ಪಡೆಯಲಿದೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 4-0 ಅಂತರದಿಂದ ಗೆಲ್ಲಲೇಬೇಕು. ಈ ಮೂಲಕ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು.

ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 1 ಅಥವಾ 2 ಪಂದ್ಯಗಳಲ್ಲಿ ಸೋಲನುಭವಿಸಿದರೆ, ಫೈನಲ್ ಪ್ರವೇಶಕ್ಕೆ ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಅಂದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ (55.56%) ತೃತೀಯ ಸ್ಥಾನದಲ್ಲಿರುವ ನ್ಯೂಝಿಲೆಂಡ್ (54.550%) ಮತ್ತು ನಾಲ್ಕನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ (54.17%) ತಂಡಗಳ ಮುಂದಿನ ಪಂದ್ಯಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.

ಹೀಗಾಗಿ ಭಾರತ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಬೇಕಿದ್ದರೆ ಆಸ್ಟ್ರೇಲಿಯಾ ತಂಡವನ್ನು 4-0 ಅಂತರದಿಂದ ಬಗ್ಗು ಬಡಿಯಲೇಬೇಕು. ಈ ಮೂಲಕ 65.79% ಅಂಕಗಳನ್ನು ಕಲೆಹಾಕಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಬಹುದು. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳ ಸರಮಾಲೆಯಾಗಿ ಮಾರ್ಪಟ್ಟಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನೂತನ ಅಂಕ ಪಟ್ಟಿ (ನವೆಂಬರ್ 3, 2024): 1-ಆಸ್ಟ್ರೇಲಿಯಾ, 2-ಭಾರತ, 3-ಶ್ರೀಲಂಕಾ, 4-ನ್ಯೂಝಿಲೆಂಡ್, 5-ಸೌತ್ ಆಫ್ರಿಕಾ.