T20 World cup: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಪ್ರಮುಖ 5 ವಿವಾದಗಳಿವು
TV9 Web | Updated By: ಪೃಥ್ವಿಶಂಕರ
Updated on:
Oct 16, 2022 | 12:47 PM
T20 World cup: 2007 ರಲ್ಲಿ ಆರಂಭವಾದ ಈ ಚುಟುಕು ಸಮರ ಇಲ್ಲಿಯವರೆಗೆ ಏಳು ಆವೃತ್ತಿಗಳನ್ನು ಕಂಡಿದೆ. ಈ 7 ಆವೃತ್ತಿಗಳಲ್ಲೂ ಅನೇಕ ವಿವಾದಗಳು ಎದ್ದಿದ್ದು, ಅವುಗಳಲ್ಲಿ ಪ್ರಮುಖ 5 ವಿವಾದಗಳ ಮೇಲಿನ ಪಕ್ಷಿನೋಟ ಇಲ್ಲಿದೆ.
1 / 6
ಐಸಿಸಿ ಟಿ20 ವಿಶ್ವಕಪ್ ಇಂದಿನಿಂದ ಆರಂಭವಾಗುತ್ತಿದೆ. ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯದ ನೆಲದಲ್ಲಿ ನಡೆಯುತ್ತಿದ್ದು, ಇಡೀ ವಿಶ್ವದ ಕಣ್ಣು ಅದರ ಮೇಲೆ ನೆಟ್ಟಿದೆ. ಈ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. 2007 ರಲ್ಲಿ ಆರಂಭವಾದ ಈ ಚುಟುಕು ಸಮರ ಇಲ್ಲಿಯವರೆಗೆ ಏಳು ಆವೃತ್ತಿಗಳನ್ನು ಕಂಡಿದೆ. ಈ 7 ಆವೃತ್ತಿಗಳಲ್ಲೂ ಅನೇಕ ವಿವಾದಗಳು ಎದ್ದಿದ್ದು, ಅವುಗಳಲ್ಲಿ ಪ್ರಮುಖ 5 ವಿವಾದಗಳ ಮೇಲಿನ ಪಕ್ಷಿನೋಟ ಇಲ್ಲಿದೆ.
2 / 6
ಮೊದಲ ಆವೃತ್ತಿಯಲ್ಲಿಯೇ ದೊಡ್ಡ ವಿವಾದ ಉಂಟಾಗಿದ್ದು, ಈ ವಿವಾದದ ನಂತರ ಇತಿಹಾಸವೇ ಸೃಷ್ಟಿಯಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ ನಡುವೆ ವಾಗ್ವಾದ ನಡೆದಿತ್ತು. ಇಬ್ಬರ ನಡುವೆ ಸಾಕಷ್ಟು ಮಾತಿನ ಯುದ್ದ ನಡೆಯಿತು. ಇದರಿಂದ ಕೋಪಗೊಂಡ ಯುವರಾಜ್ ಮುಂದಿನ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆದ 6 ಎಸೆತಗಳನ್ನು ಸಿಕ್ಸರ್ಗಟ್ಟಿ ಫ್ಲಿಂಟಾಫ್ ಮೇಲಿನ ಕೋಪವನ್ನು ಕಡಿಮೆ ಮಾಡಿಕೊಂಡಿದ್ದರು.
3 / 6
2007 ರ ನಂತರ, T20 ವಿಶ್ವಕಪ್‌ನ ಮುಂದಿನ ಆವೃತ್ತಿಯನ್ನು 2009 ರಲ್ಲಿ ಆಡಲಾಯಿತು. ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ವಿವಾದಗಳಲ್ಲಿ ಸಿಲುಕಿದರು. ಅಶಿಸ್ತಿನ ಕಾರಣ ಅವರನ್ನು ಪಂದ್ಯಾವಳಿಯ ಮಧ್ಯದಿಂದಲೇ ಮನೆಗೆ ಕಳುಹಿಸಲಾಯಿತು. ಕುಡಿದ ಮತ್ತಿನಲ್ಲಿ ಸಂದರ್ಶನ ಕೊಟ್ಟಿದ್ದ ಸೈಮಂಡ್ಸ್, ಅದರ ಹ್ಯಾಂಗೊವರ್‌ನಲ್ಲಿ ಮ್ಯಾಚ್ ಕೂಡ ಆಡಿದ್ದರು. ಹೀಗಾಗಿ ಅವರನ್ನು ಪಂದ್ಯಾವಳಿಯಿಂದ ಹೊರಗಟ್ಟಲಾಯಿತು.
4 / 6
ರಾಜಕೀಯ ಕಾರಣಗಳಿಗಾಗಿ ಜಿಂಬಾಬ್ವೆ ತಂಡ 2009ರ ವಿಶ್ವಕಪ್‌ನಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಈ ಆವೃತ್ತಿಯಿಂದ ಜಿಂಬಾಬ್ವೆ ತಂಡವನ್ನು ನಿಷೇಧಿಸುವ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಆದರೆ ಜಿಂಬಾಬ್ವೆ ತಂಡವೇ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿತು.
5 / 6
2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗಿತ್ತು. ಈ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದಿದ್ದು, ಇದಕ್ಕೂ ಮುನ್ನ ಹಿಮಾಚಲ ಪ್ರದೇಶದ ಧರ್ಮಶಾಲಾ ನಗರದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಬೇಕಿತ್ತು. ಅಂದಿನ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವಿಭದ್ರ ಸಿಂಗ್ ಪಂದ್ಯಕ್ಕೆ ಭದ್ರತೆ ಒದಗಿಸಲು ಅಸಾಧ್ಯ ಎಂದಿದ್ದರು. ಆ ಬಳಿಕ ಬಿಸಿಸಿಐ ಮತ್ತು ಐಸಿಸಿ ಸಮಸ್ಯೆಯನ್ನು ಪರಿಹರಿಸಿ ಕೋಲ್ಕತ್ತಾದಲ್ಲಿ ಪಂದ್ಯವನ್ನು ಆಯೋಜಿಸಲಾಯಿತು.
6 / 6
ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕ್ವಿಂಟನ್ ಡಿ ಕಾಕ್ ವೆಸ್ಟ್ ಇಂಡೀಸ್ ವಿರುದ್ಧ ಆಡಲು ನಿರಾಕರಿಸಿದ್ದರು. ಹೀಗಾಗಿ ವಿವಾದ ಹುಟ್ಟಿಕೊಂಡಿತ್ತು. ವಾಸ್ತವವಾಗಿ ಡಿ ಕಾಕ್, ಕಳೆದ ವರ್ಷ ವರ್ಣಭೇದ ನೀತಿಯ ವಿರುದ್ಧ ಆರಂಭಿಸಿದ್ದ ಅಭಿಯಾನದಲ್ಲಿ ದಕ್ಷಿಣ ಆಫ್ರಿಕಾದ ಉಳಿದ ಆಟಗಾರರೊಂದಿಗೆ ಒಂದು ಮಂಡಿಯೂರಿ ಕುಳಿತುಕೊಳ್ಳಲು ನಿರಾಕರಿಸಿದ್ದರು ಎಂದು ವರದಿಯಾಗಿತ್ತು. ಆ ಬಳಿಕ ಡಿ ಕಾಕ್ ತನ್ನ ನಡೆಗೆ ಐಸಿಸಿ ಮುಂದೆ ಕ್ಷಮೆಯಾಚಿಸಿದ್ದರು.
Published On - 12:47 pm, Sun, 16 October 22