ಟೀಮ್ ಇಂಡಿಯಾಗೆ ಕಿತ್ತೋದ ಪಿಚ್ ನೀಡಿದ ಆಸ್ಟ್ರೇಲಿಯಾ..!
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದಿವೆ. ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ದಾಖಲಿಸಿತು. ಇನ್ನು ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿದೆ. ಇದೀಗ ಉಭಯ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.
1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿದೆ. ಇದರ ನಡುವೆ ಟೀಮ್ ಇಂಡಿಯಾದ ಅಭ್ಯಾಸಕ್ಕಾಗಿ ನೀಡಿದ ಪಿಚ್ ಬಗ್ಗೆ ಅಪಸ್ವರಗಳು ಕೇಳಿ ಬಂದಿದೆ.
2 / 5
ಭಾರತ ತಂಡದ ಅಭ್ಯಾಸಕ್ಕೆ ಹಳೆಯ ಪಿಚ್ ಅನ್ನು ನಿಗದಿ ಮಾಡಲಾಗಿದೆ. ಹಲವು ಕಡೆ ಕಿತ್ತೋಗಿರುವ ಈ ಪಿಚ್ನಲ್ಲಿ ಅಭ್ಯಾಸ ನಡೆಸುವುದು ಹೇಗೆ ಎಂದು ಕೆಲ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಈ ಪಿಚ್ನಲ್ಲಿ ಚೆಂಡು ಬೌನ್ಸ್ ಆಗುತ್ತಿಲ್ಲ. ಹೀಗಾಗಿ ಇದು ಅಭ್ಯಾಸಕ್ಕೆ ಯೋಗ್ಯವಲ್ಲದ ಪಿಚ್ ಎನ್ನಲಾಗಿದೆ.
3 / 5
ಆದರೆ ಮತ್ತೊಂದೆಡೆ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾದ ಪಿಚ್ ಅತ್ಯುತ್ತಮ ಗುಣಮುಟ್ಟದಿಂದ ಕೂಡಿದೆ. ಅಲ್ಲದೆ ಎಂಸಿಜಿ ಕ್ಯುರೇಟರ್ಗಳು ಆಸ್ಟ್ರೇಲಿಯಾ ಅಭ್ಯಾಸ ಮಾಡಬೇಕಿರುವ ಪಿಚ್ನಲ್ಲಿ ರೋಲರ್ ಓಡಿಸುತ್ತಿರುವುದು ಈ ಫೋಟೋದಲ್ಲಿ ಕಾಣಬಹುದು. ಹೀಗಾಗಿಯೇ ಎಂಸಿಜಿ ಆಡಳಿತ ಮಂಡಳಿಯ ತಾರತಮ್ಯದ ಬಗ್ಗೆ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿದೆ.
4 / 5
ಈ ಬಗ್ಗೆ ಎಂಸಿಜಿ ಕ್ಯುರೇಟರ್ರನ್ನು ಪ್ರಶ್ನಿಸಿದಾಗ, ನಮ್ಮಲ್ಲಿರುವ ಪಿಚ್ಗಳನ್ನು ಮಾತ್ರ ನಾವು ನೀಡಲು ಸಾಧ್ಯ. ಹೀಗಾಗಿ ಇರುವ ಪಿಚ್ ನೀಡಿದ್ದೇವೆ ಎಂದು ತನ್ನ ನಡೆಯನ್ನು ಕ್ಯುರೇಟರ್ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಕಳಪೆ ಗುಣಮಟ್ಟದ ಪಿಚ್ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ನ ನಡೆಯ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೇಗೆ ಸಮರ್ಥಿಸಿಕೊಳ್ಳಲಿದೆ ಕಾದು ನೋಡಬೇಕಿದೆ.
5 / 5
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಗುರುವಾರದಿಂದ ಶುರುವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಅದರಲ್ಲೂ ಈ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಯನ್ನು ಸುಗಮಗೊಳಿಸಬಹುದು. ಹೀಗಾಗಿ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.