
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಟೀಂ ಇಂಡಿಯಾ ಈಗಾಗಲೇ 3-0 ಅಂತರದಿಂದ ವಶಪಡಿಸಿಕೊಂಡಿದೆ. ಆದಾಗ್ಯೂ ಟೀಂ ಇಂಡಿಯಾಕ್ಕೆ ಆಘಾತವೊಂದು ಎದುರಾಗಿದೆ. ಇಂಜುರಿಯಿಂದಾಗಿ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಉಳಿದೆರಡು ಪಂದ್ಯಗಳಿಂದಲೂ ಹೊರಬಿದ್ದಿದ್ದಾರೆ.

ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ತಿಲಕ್ ವರ್ಮಾ ಅವರ ಅಲಭ್ಯತೆಯನ್ನು ಖಚಿತಪಡಿಸಿದ್ದು, ಅವರ ಬದಲಿಯಾಗಿ ತಂಡಕ್ಕೆ ಆಯ್ಕೆಯಾಗಿದ್ದ ಶ್ರೇಯಸ್ ಅಯ್ಯರ್, ಉಳಿದ ಎರಡು ಪಂದ್ಯಗಳಿಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದಿದೆ. ಇದರರ್ಥ ತಿಲಕ್ ವರ್ಮಾ ನೆರವಾಗಿ ಟಿ20 ವಿಶ್ವಕಪ್ಗೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೇಲೆ ಹೇಳಿದಂತೆ ಐದು ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಗಾಯಗೊಂಡ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದಾಗ್ಯೂ, ತಿಲಕ್ ವರ್ಮಾ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಬೆಂಗಳೂರಿನ ಬಿಸಿಸಿಐ ಎಕ್ಸಲೆನ್ಸ್ ಸೆಂಟರ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ, ಅವರನ್ನು ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಇದರೊಂದಿಗೆ, ಶ್ರೇಯಸ್ ಅಯ್ಯರ್ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.

‘ತಿಲಕ್ ವರ್ಮಾ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಪೂರ್ಣ ಪಂದ್ಯದ ಫಿಟ್‌ನೆಸ್ ಪಡೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅವರು ಲಭ್ಯವಿರುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

ಫೆಬ್ರವರಿ 3 ರ ನಂತರ ತಿಲಕ್ ಮುಂಬೈನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಂದರೆ, 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಅಭ್ಯಾಸ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ, ಪುರುಷರ ಆಯ್ಕೆ ಸಮಿತಿಯು ನ್ಯೂಜಿಲೆಂಡ್ ತಂಡದ ವಿರುದ್ಧದ ಉಳಿದ ಪಂದ್ಯಗಳಿಗೆ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಮುಂದುವರಿಸುವಂತೆ ಶಿಫಾರಸು ಮಾಡಿದೆ ಎಂಬುದನ್ನು ಸೈಕಿಯಾ ಖಚಿತಪಡಿಸಿದ್ದಾರೆ.