Travis Head: ಟ್ರಾವಿಸ್ ಹೆಡ್ ಆರ್ಭಟಕ್ಕೆ ಹಳೆಯ ದಾಖಲೆಗಳು ಛಿದ್ರ..!
Travis Head: ಕ್ರಿಕೆಟ್ ಅಂಗಳದಲ್ಲಿ ಆಸ್ಟ್ರೇಲಿಯನ್ ಓಪನರ್ ಟ್ರಾವಿಸ್ ಹೆಡ್ ಪರಾಕ್ರಮ ಮುಂದುವರೆದಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಹಲವು ದಾಖಲೆ ನಿರ್ಮಿಸಿದ್ದ ಹೆಡ್ ಇದೀಗ ಏಕದಿನ ಪಂದ್ಯದಲ್ಲೂ ಸ್ಪೋಟಕ ಇನಿಂಗ್ಸ್ ಆಡಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
1 / 7
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದ ಗೆಲುವಿನ ರೂವಾರಿ ಆಸ್ಟ್ರೇಲಿಯಾ ತಂಡದ ಸ್ಪೋಟಕ ದಾಂಡಿಗ ಟ್ರಾವಿಸ್ ಹೆಡ್.
2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಬೆನ್ ಡೆಕಟ್ 95 ರನ್ ಬಾರಿಸಿ ಅಬ್ಬರಿಸಿದರು. ಆ ಬಳಿಕ ಬಂದ ವಿಲ್ ಜಾಕ್ಸ್ 62 ರನ್ಗಳ ಕೊಡುಗೆ ನೀಡಿದರು. ಈ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು 49.4 ಓವರ್ಗಳಲ್ಲಿ 315 ರನ್ಗಳಿಸಿ ಆಲೌಟ್ ಆಯಿತು.
3 / 7
316 ರನ್ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದರು. ಇಂಗ್ಲೆಂಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಬಿರುಸಿನ ಬ್ಯಾಟಿಂಗ್ನೊಂದಿಗೆ ಹೆಡ್ ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದರು.
4 / 7
ಶತಕದ ಬಳಿಕವೂ ಸಿಡಿಲಬ್ಬರದ ಮುಂದುವರೆಸಿದ ಟ್ರಾವಿಡ್ ಹೆಡ್ 129 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 20 ಫೋರ್ಗಳೊಂದಿಗೆ ಅಜೇಯ 154 ರನ್ ಬಾರಿಸಿದರು. ಈ ಮೂಲಕ 44 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು 317 ರನ್ಗಳ ಗುರಿ ತಲುಪಿಸಿ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟ್ರಾವಿಸ್ ಹೆಡ್ ಹಲವು ದಾಖಲೆಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂದರೆ...
5 / 7
ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತ ಕಲೆಹಾಕಿದ ದಾಖಲೆ ಟ್ರಾವಿಸ್ ಹೆಡ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (137) ಹೆಸರಿನಲ್ಲಿತ್ತು. ಇದೀಗ 154 ರನ್ ಬಾರಿಸುವ ಮೂಲಕ ಹೆಡ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
6 / 7
ಹಾಗೆಯೇ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 2 ಬಾರಿ 150+ ಸ್ಕೋರ್ಗಳಿಸಿದ ಆಸ್ಟ್ರೇಲಿಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಟ್ರಾವಿಸ್ ಹೆಡ್ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶೇನ್ ವಾಟ್ಸನ್ (161) ಅಗ್ರಸ್ಥಾನದಲ್ಲಿದ್ದಾರೆ.
7 / 7
ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅತ್ಯಧಿಕ ಫೋರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಕೂಡ ಹೆಡ್ ಪಾಲಾಗಿದೆ. ಈ ಪಂದ್ಯದಲ್ಲಿ 20 ಬೌಂಡರಿಗಳನ್ನು ಸಿಡಿಸಿ ಟ್ರಾವಿಸ್ ಹೆಡ್ ಈ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಸ್ಪೋಟಕ ಸೆಂಚುರಿಯೊಂದಿಗೆ ಹೆಡ್ 'ಮಾಸ್ಟರ್ ಸ್ಟ್ರೋಕ್' ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.