ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಪಡೆಗೆ ದೊಡ್ಡ ತಲೆನೋವಾಗಿರುವ ಆಟಗಾರನೆಂದರೆ ಅದು ಟ್ರಾವಿಸ್ ಹೆಡ್. ಅಡಿಲೇಡ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಹೆಡ್, ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಹೀಗಾಗಿ ಬ್ರಿಸ್ಬೇನ್ ಟೆಸ್ಟ್ಗೂ ಮುನ್ನ ಹೆಡ್ ಅವರ ಫಾರ್ಮ್ ಟೀಂ ಇಂಡಿಯಾಕ್ಕೆ ಆತಂಕ ತಂದೊಡ್ಡಿದೆ.
ಅಡಿಲೇಡ್ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಹೆಡ್ 141 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದು ಟೀಂ ಇಂಡಿಯಾಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ಅಂತಿಮವಾಗಿ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಹೆಡ್ ಹೊರತುಪಡಿಸಿ ಆಸೀಸ್ ತಂಡದ ಉಳಿದ ಬ್ಯಾಟ್ಸ್ಮನ್ಗಳು ಟೀಂ ಇಂಡಿಯಾದ ಮುಂದೆ ಮಂಕಾಗಿರುವುದು ಎರಡೂ ಟೆಸ್ಟ್ಗಳಲ್ಲಿ ಸಾಭೀತಾಗಿದೆ.
ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಹೆಡ್ರನ್ನು ಕಟ್ಟಿಹಾಕಲು ಟೀಂ ಇಂಡಿಯಾ ಸಾಕಷ್ಟು ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಇದರ ನಡುವೆ ಮೂರನೇ ಟೆಸ್ಟ್ ನಡೆಯುವ ಗಾಬಾ ಮೈದಾನದಲ್ಲಿ ಹೆಡ್ ಅವರ ಪ್ರದರ್ಶನ ರೋಹಿತ್ ಪಡೆಗೆ ಕೊಂಚ ನಿರಾಳತೆ ತಂದಿದೆ. ಏಕೆಂದರೆ ಈ ಮೈದಾನದಲ್ಲಿ ಆಡಿರುವ ಕಳೆದ 3 ಇನ್ನಿಂಗ್ಸ್‌ಗಳಲ್ಲಿ ಹೆಡ್ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಮೇಲೆ ಹೇಳಿದಂತೆ ಟ್ರಾವಿಸ್ ಹೆಡ್ ಕಳೆದ 724 ದಿನಗಳಿಂದ ಗಾಬಾ ಮೈದಾನದಲ್ಲಿ ಖಾತೆ ತೆರೆದಿಲ್ಲ. ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೆಡ್ ಇದೇ ಮೈದಾನದಲ್ಲಿ ಆಡಿದ್ದರು. ಆಶ್ಚರ್ಯಕರ ಸಂಗತಿಯೆಂದರೆ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಹೆಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಶೂನ್ಯದ ಸಾಧನೆ ಮಾಡಿದ್ದರು.
ಅಂದಹಾಗೆ, ಈ ಎರಡು ಇನ್ನಿಂಗ್ಸ್‌ಗೂ ಮುನ್ನ ಆಡಿದ್ದ ಒಂದು ಇನ್ನಿಂಗ್ಸ್‌ನಲ್ಲೂ ಹೆಡ್ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. 2022 ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲೂ ಟ್ರಾವಿಸ್ ಹೆಡ್ ಸೊನ್ನೆ ಸುತ್ತಿದ್ದರು. ಅರ್ಥಾತ್, ಗಾಬಾದಲ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಹೆಡ್ ಶೂನ್ಯಕ್ಕೆ ಔಟಾಗಿದ್ದಾರೆ.
ಆದರೆ ಬ್ರಿಸ್ಬೇನ್‌ನಲ್ಲಿ ಹೆಡ್ ಸತತ ಮೂರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 0 ರನ್‌ಗೆ ಔಟಾಗಿರಬಹುದು. ಆದರೆ ಇದರ ಹೊರತಾಗಿಯೂ, ಈ ಮೈದಾನದಲ್ಲಿ ಅವರ ಸರಾಸರಿ 50 ಕ್ಕಿಂತ ಹೆಚ್ಚಿದೆ. ಗಾಬಾದಲ್ಲಿ ಇದುವರೆಗೆ 7 ಇನ್ನಿಂಗ್ಸ್ಗಳನ್ನು ಆಡಿರುವ ಹೆಡ್ 50.28 ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರು ಒಂದು ಶತಕ ಮತ್ತು 2 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ಪ್ರಸ್ತುತ ಟ್ರಾವಿಸ್ ಹೆಡ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತದ ಚಿಂತೆಯನ್ನು ಹೆಚ್ಚಿಸಿದೆ. ಒಂದು ವೇಳೆ ಹೆಡ್ರನ್ನು ಬೇಗ ಕಟ್ಟಿಹಾಕಿದಿದ್ದರೆ ಟೀಂ ಇಂಡಿಯಾಗೆ ಗೆಲುವು ಕಷ್ಟವಾಗಲಿದೆ. ಹೆಡ್ ಅವರ ಇನ್ನೊಂದು ವಿಶೇಷತೆ ಏನೆಂದರೆ, ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದಾಗಲೆಲ್ಲಾ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಗಾಬಾದಲ್ಲಿ ಹೆಡ್ ಶತಕ ಸಿಡಿದಂತೆ ಭಾರತದ ವೇಗಿಗಳು ತಡೆಯಬೇಕಿದೆ.