- Kannada News Photo gallery Cricket photos IPL 2025: Sanjeev Goenka's Shocking Revelation About KL Rahul Post-Auction
‘ಅವರೊಬ್ಬ ಸಭ್ಯ ವ್ಯಕ್ತಿ’; ರಾಹುಲ್ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಲಕ್ನೋ ಮಾಲೀಕ
Sanjiv Goenka- KL Rahul: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ, ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಅವರನ್ನು ಕುಟುಂಬದ ಸದಸ್ಯ ಎಂದು ಕರೆದ ಸಂಜೀವ್, ಅವರ ನಾಯಕತ್ವ ಮತ್ತು ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. ಸಂಜೀವ್ ಅವರ ಈ ಹೇಳಿಕೆ ಐಪಿಎಲ್ ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಚರ್ಚೆಗೆ ಕಾರಣವಾಗಿದೆ.
Updated on: Dec 13, 2024 | 5:05 PM

2025 ರ ಐಪಿಎಲ್ಗಾಗಿ ಎಲ್ಲಾ ತಂಡಗಳು ಈಗಾಗಲೇ ತಮ್ಮ ತಯಾರಿಯನ್ನು ಆರಂಭಿಸಿವೆ. ಇತ್ತೀಚಿಗಷ್ಟೇ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ಕಟ್ಟುವಲ್ಲಿ ಯಶಸ್ವಿಯಾಗಿವೆ. ಇದರ ಜೊತೆಗೆ ಕಳೆದ ಆವೃತ್ತಿಯಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ಕೆಲವು ಆಟಗಾರರು ಮುಂಬರುವ ಆವೃತ್ತಿಯಿಂದ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಒಬ್ಬರಾಗಿದ್ದಾರೆ.

ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ರಾಹುಲ್, ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಇದರ ಜೊತೆಗೆ ಪಂದ್ಯದ ವೇಳೆ ರಾಹುಲ್ ಹಾಗೂ ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೊಯೆಂಕಾ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆದಿತ್ತು.

ಹೀಗಾಗಿ ರಾಹುಲ್ ಮುಂಬರುವ ಆವೃತ್ತಿಯಲ್ಲಿ ತಂಡವನ್ನು ಬದಲಿಸುವುದು ಖಚಿತವಾಗಿತ್ತು. ಅದರಂತೆ ಮೆಗಾ ಹರಾಜಿಗೂ ಮೊದಲು ರಾಹುಲ್ರನ್ನು ಲಕ್ನೋ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿತ್ತು. ಆ ವೇಳೆ ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರ ಬಗ್ಗೆ ಮಾತನಾಡಿದ್ದ ಸಂಜೀವ್, ತನ್ನ ಹಿತಾಸಕ್ತಿಗಾಗಿ ಅಲ್ಲದೆ ತಂಡಕ್ಕಾಗಿ ಆಡುವ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ ಎಂದಿದ್ದರು.

ಸಂಜೀವ್ ಅವರು ಈ ಹೇಳಿಕೆಯನ್ನು ರಾಹುಲ್ ಅವರಿಗೆ ಹೇಳಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಹಾಗೆಯೇ ರಾಹುಲ್ ಮತ್ತು ಸಂಜೀವ್ ನಡುವೆ ಶೀತಲ ಸಮರ ನಡೆಯುತ್ತಿರುವುದಾಗಿಯೂ ಕೆಲವರು ಬಿಂಬಿಸಿದ್ದರು. ಆದರೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿರುವ ಸಂಜೀವ್ ಇದೇ ಮೊದಲ ಬಾರಿಗೆ ಕನ್ನಡಿಗನನ್ನು ಹೊಗಳಿ ಮಾತನಾಡಿದ್ದಾರೆ.

ಟಿಆರ್‌ಎಸ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಸಂಜೀವ್,‘ರಾಹುಲ್ ಯಾವಾಗಲೂ ನನಗೆ ಕುಟುಂಬದ ಭಾಗವಾಗಿದ್ದಾರೆ ಮತ್ತು ಯಾವಾಗಲೂ ಹಾಗೆ ಇರುತ್ತಾರೆ. ಅವರು ಮೂರು ವರ್ಷಗಳ ಕಾಲ ಲಕ್ನೋ ತಂಡದ ನಾಯಕತ್ವ ವಹಿಸಿದರು ಮತ್ತು ಅವರ ನಾಯಕತ್ವದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಿದರು. ಏನೇ ಆಗಲಿ ಅವರು ಮುಂದೆ ಸಾಗುವುದನ್ನು ನೋಡಲು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ.

ಅವರೊಬ್ಬ ಸಭ್ಯ ವ್ಯಕ್ತಿ. ರಾಹುಲ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಮತ್ತು ಅವರಂತಹ ಪ್ರಾಮಾಣಿಕ ವ್ಯಕ್ತಿಯಿಂದ ಒಳ್ಳೆಯದೇ ಆಗಲಿ ಎಂದು ನಾನು ಬಯಸುತ್ತೇನೆ. ಅವರು ತುಂಬಾ ಪ್ರತಿಭಾವಂತರು ಮತ್ತು ಅವರು ತಮ್ಮ ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಶುಭಾಶಯಗಳು ಅವರೊಂದಿಗೆ ಎಂದಿಗೂ ಇರುತ್ತದೆ ಎಂದು ಸಂಜೀವ್ ಹೇಳಿದ್ದಾರೆ.

ಸಂಜೀವ್ ಅವರ ಈ ಹೇಳಿಕೆ ಎಲ್ಲರೂ ಅಚ್ಚರಿ ಮೂಡಿಸಿದೆ. ಏಕೆಂದರೆ ಮೆಗಾ ಹರಾಜಿನಲ್ಲಿ ಒಮ್ಮೆಯೂ ರಾಹುಲ್ಗಾಗಿ ಬಿಡ್ ಮಾಡದ ಸಂಜೀವ್ ಅವರು ರಾಹುಲ್ ಅವರ ಬದಲಿಯಾಗಿ ರಿಷಬ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಹಾಗೂ ಡೆಲ್ಲಿ ಫ್ರಾಂಚೈಸಿಯೊಂದಿಗೆ ಜಿದ್ದಿಗೆ ಬಿದ್ದಿದ್ದರು. ಅಂತಿಮವಾಗಿ 27 ಕೋಟಿ ರೂ. ನೀಡಿ ಪಂತ್ರನ್ನು ಖರೀದಿಸುವಲ್ಲೂ ಯಶಸ್ವಿಯಾಗಿದ್ದರು. ಇದೀಗ ರಾಹುಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಸಂಜೀವ್, ಹರಾಜಿನಲ್ಲಿ ರಾಹುಲ್ರನ್ನು ಏಕೆ ಖರೀದಿಸಲು ಯೋಚಿಸಲಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
























