ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ (T20 World Cup 2024) ಆಸ್ಟ್ರೇಲಿಯಾ ತಂಡವು ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಇದಕ್ಕಾಗಿ ಈಗಲೇ ತಂಡದ ಸಂಯೋಜನೆಯನ್ನು ರೂಪಿಸಿದೆ. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಆಸೀಸ್ ಪರ ಕಣಕ್ಕಿಳಿಯುವ ಟಾಪ್-3 ಬ್ಯಾಟರ್ಗಳನ್ನು ಕನ್ಫರ್ಮ್ ಮಾಡಿಕೊಂಡಿದೆ.
ಅದರಂತೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಟಿ20 ಕ್ರಿಕೆಟ್ನಲ್ಲಿ ಓಪನರ್ ಆಗಿ ಆಡುತ್ತಿದ್ದ ಮಿಚೆಲ್ ಮಾರ್ಷ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಕಳೆದ ಏಕದಿನ ವಿಶ್ವಕಪ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಆಡಿದ್ದರು. ಇಬ್ಬರು ಎಡಗೈ ಬ್ಯಾಟರ್ಗಳಾಗಿದ್ದರೂ ಉತ್ತಮ ಹೊಂದಾಣಿಕೆಯೊಂದಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು. ಹೀಗಾಗಿ ಮಿಚೆಲ್ ಮಾರ್ಷ್ಗೆ ಹಿಂಬಡ್ತಿ ನೀಡಿ ಟಿ20 ಕ್ರಿಕೆಟ್ನಲ್ಲೂ ಹೆಡ್-ಡೇವಿಡ್ರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
ಇನ್ನು ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೆ ಮಿಚೆಲ್ ಮಾರ್ಷ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿರುವ ಕಾರಣ ಟಿ20 ವಿಶ್ವಕಪ್ನಲ್ಲೂ ಅವರ ಸಾರಥ್ಯದಲ್ಲೇ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ. ಅಲ್ಲದೆ ಪ್ಯಾಟ್ ಕಮಿನ್ಸ್ ಆಲ್ರೌಂಡರ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್ , ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್ , ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.
ಈ ಬಾರಿ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಆತಿಥೇಯ ಯುಎಸ್ಎ ಹಾಗೂ ಕೆನಡಾ ತಂಡಗಳು ಉದ್ಘಾಟನಾ ಪಂದ್ಯವನ್ನಾಡಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 5 ರಂದು ಒಮಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಜರ್ನಿ ಶುರು ಮಾಡಲಿದೆ.