
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನ ಸೂಪರ್ ಸಿಕ್ಸ್ ಸುತ್ತಿನಲ್ಲಿ ಭಾರತ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 297 ರನ್ ಕಲೆಹಾಕಿದೆ. ಈ ಮೂಲಕ ನೇಪಾಳ ತಂಡಕ್ಕೆ 298 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಆದರ್ಶ್ ಸಿಂಗ್ 21 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ಆರ್ಶಿನ್ ಕುಲಕರ್ಣಿ ಕೂಡ 18 ರನ್ ದಾಟಿ ಮುಂದೆ ಹೊಗಲಿಲ್ಲ.

ಆದರೆ ನಾಲ್ಕನೇ ವಿಕೆಟ್ಗೆ ಜೊತೆಯಾದ ನಾಯಕ ಉದಯ್ ಸಹಾರನ್ ಹಾಗೂ ಸಚಿನ್ ದಾಸ್ ಇಬ್ಬರು ಶತಕ ಸಿಡಿಸುವ ಮೂಲಕ ತಂಡವನ್ನು ಬೃಹತ್ ಟಾರ್ಗೆಟ್ನತ್ತ ಕೊಂಡೊಯ್ದರು. ಈ ಇಬ್ಬರ ನಡುವೆ ದ್ವಿಶತಕದ ಜೊತೆಯಾಟವೂ ಕಂಡು ಬಂತು.

ನಾಯಕ ಉದಯ್ ಸಹಾರನ್ ತಮ್ಮ ಇನ್ನಿಂಗ್ಸ್ನಲ್ಲಿ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 100 ರನ್ ಸಿಡಿಸಿದರು.

ನಾಯಕನಿಗೆ ಉತ್ತಮ ಸಾಥ್ ನೀಡಿದ ಸಚಿನ್ ದಾಸ್ ತಮ್ಮ ಇನ್ನಿಂಗ್ಸ್ನಲ್ಲಿ 101 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಸಹಿತ 116 ರನ್ ಕಲೆಹಾಕಿದರು.

ಈ ಇಬ್ಬರನ್ನು ಹೊರತುಪಡಿಸಿ ತಂಡದ ಉಳಿದ ಬ್ಯಾಟರ್ಗಳಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಕಂಡುಬರಲಿಲ್ಲ. ಇನ್ನು ನೇಪಾಳ ಪರ ಗುಲ್ಸನ್ ಝಾ ಅತ್ಯಧಿಕ 3 ವಿಕೆಟ್ ಪಡೆದರೆ, ಆಕಾಶ್ ಚಾಂದ್ 1 ವಿಕೆಟ್ ಪಡೆದರು.
Published On - 5:20 pm, Fri, 2 February 24