
ಅಂಡರ್-19 ವಿಶ್ವಕಪ್ನಲ್ಲಿ ವೈಭವ್ ಸೂರ್ಯವಂಶಿಯ (Vaibhav Sooryavanshi) ಆರ್ಭಟ ಮುಂದುವರೆದಿದೆ. ಲೀಗ್ ಹಂತದಲ್ಲಿ ಬಾಂಗ್ಲಾದೇಶ್ ವಿರುದ್ಧ 72 ರನ್ ಬಾರಿಸಿ ಅಬ್ಬರಿಸಿದ್ದ ವೈಭವ್ ಇದೀಗ ಸೂಪರ್-6 ಸುತ್ತಿನ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ.

ಬುಲವಾಯೊದ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಆರೋನ್ ಜಾರ್ಜ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಆರೋನ್ ಜಾರ್ಜ್ 16 ಎಸೆತಗಳಲ್ಲಿ 23 ರನ್ ಬಾರಿಸಿ ಔಟಾದರೆ, ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಅದರಲ್ಲೂ ಝಿಂಬಾಬ್ವೆ ಬೌಲರ್ಗಳ ಮನಸೋ ಇಚ್ಛೆ ದಂಡಿಸಿದ ಯುವ ದಾಂಡಿಗ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದು ಕೂಡ 208ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ.

ಆದರೆ ಅರ್ಧಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ವೈಭವ್ ಸೂರ್ಯವಂಶಿ 30 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ವೈಭವ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದೆ.

ಅದರಂತೆ 15 ಓವರ್ಗಳ ಮುಕ್ತಾಯದ ವೇಳೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿದೆ. ಇದೀಗ ಟೀಮ್ ಇಂಡಿಯಾ ಪರ ವೇದಾಂತ್ ತ್ರಿವೇದಿ ಹಾಗೂ ವಿಹಾನ್ ಮಲ್ಹೋತ್ರಾ ಬ್ಯಾಟಿಂಗ್ ಮುಂದುವರೆಸಿದ್ದು, ಭಾರತ ತಂಡವು ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿದೆ.