
ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ತನ್ನ ಹಳೆಯ ತಂಡದಲ್ಲೇ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಿನದ ಮೊದಲ ಖರೀದಿಯಾಗಿ ಶಾರುಖ್ ಫ್ರಾಂಚೈಸ್ ವೆಂಕಟೇಶ್ ಅಯ್ಯರ್ ಅವರನ್ನು 23 ಕೋಟಿ 75 ಲಕ್ಷ ರೂ.ಗಳಿಗೆ ಖರೀದಿಸಿದೆ.

ವೆಂಕಟೇಶ್ ಅಯ್ಯರ್ 2021 ರಿಂದ ಕೆಕೆಆರ್ ತಂಡದ ಪರ ಆಡುತ್ತಿದ್ದು, ಈ ತಂಡದ ಜೊತೆಗೆ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ ಕೆಕೆಆರ್, ವೆಂಕಟೇಶ್ ಅವರನ್ನು ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಆದರೀಗ ಕೆಕೆಆರ್ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತ ನೀಡಿ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಾಸ್ತವವಾಗಿ ವೆಂಕಟೇಶ್ ಅವರನ್ನು ಖರೀದಿಸಲು ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ಕಂಡುಬಂದಿತು. ಈ ದೇಶೀ ಆಟಗಾರನಿಗಾಗಿ ಆರ್ಸಿಬಿ 23.50 ಕೋಟಿ ರೂಗಳನ್ನು ಖರ್ಚು ಮಾಡಲು ಸಿದ್ದವಾಗಿತ್ತು. ಆದರೆ ಕೆಕೆಆರ್ 23.75 ಕೋಟಿ ರೂ. ನೀಡಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.

ವೆಂಕಟೇಶ್ ಅಯ್ಯರ್ ಇದುವರೆಗಿನ ಐಪಿಎಲ್ ವೃತ್ತಿಜೀವನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿರುವ 51 ಪಂದ್ಯಗಳಲ್ಲಿ 31.57 ಸರಾಸರಿ ಮತ್ತು 137.12 ಸ್ಟ್ರೈಕ್ ರೇಟ್‌ನಲ್ಲಿ 1,327 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕ ಮತ್ತು 1 ಶತಕ ಕೂಡ ಸೇರಿದೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 104 ರನ್ ಆಗಿದೆ. ಇದರೊಂದಿಗೆ 121 ಬೌಂಡರಿ ಹಾಗೂ 61 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಬೌಲಿಂಗ್‌ನಲ್ಲೂ ಮಿಂಚಿರುವ ವೆಂಕಟೇಶ್ 3 ವಿಕೆಟ್ ಪಡೆದಿದ್ದಾರೆ. ಇನ್ನು ಕಳೆದ ಐಪಿಎಲ್‌ನಲ್ಲಿ 15 ಪಂದ್ಯಗಳನ್ನಾಡಿದ್ದ ವೆಂಕಟೇಶ್ 46.25 ರ ಸರಾಸರಿಯಲ್ಲಿ 370 ರನ್ ಗಳಿಸಿದ್ದರು. ಇದು ಅವರ ಅತ್ಯುತ್ತಮ ಬ್ಯಾಟಿಂಗ್‌ಗೆ ಉದಾಹರಣೆಯಾಗಿದೆ. ಹೀಗಾಗಿಯೇ ಕೆಕೆಆರ್, ವೆಂಕಟೇಶ್ ಮೇಲೆ ಇಷ್ಟು ನಂಬಿಕೆ ಇಟ್ಟಿದೆ.