
ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಏಕೆಂದರೆ ಇದು ವಿರಾಟ್ ಕೊಹ್ಲಿ ಅವರ ಶತಕದ ಟೆಸ್ಟ್. ಈ ಮೂಲಕ ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ದೊಡ್ಡ ದಾಖಲೆ ಮಾಡುವ ಅವಕಾಶ ಕೂಡ ವಿರಾಟ್ ಕೊಹ್ಲಿ ಮುಂದಿದೆ.

ವಿರಾಟ್ ಕೊಹ್ಲಿ ಶತಕ ಬಾರಿಸಿ ವರ್ಷಗಳು ಕಳೆದಿವೆ. ಒಂದು ವೇಳೆ ಶ್ರೀಲಂಕಾ ವಿರುದ್ದ ಶತಕ ಬಾರಿಸಿದ್ರೆ ದಾಖಲೆ ಮೇಲೆ ದಾಖಲೆ ನಿರ್ಮಾಣವಾಗಲಿದೆ. ಏಕೆಂದರೆಭಾರತದ ಇತಿಹಾಸದಲ್ಲಿ ಯಾವುದೇ ಕ್ರಿಕೆಟಿಗರು 100 ನೇ ಟೆಸ್ಟ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗಿಲ್ಲ. ಒಟ್ಟು 11 ಭಾರತೀಯ ಆಟಗಾರರು 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ 100ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇಲ್ಲಿಯವರೆಗೆ 9 ಆಟಗಾರರು 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಮೊದಲನೆಯದಾಗಿ 1968ರಲ್ಲಿ ಇಂಗ್ಲೆಂಡ್‌ನ ಕಾಲಿನ್ ಕೌಡ್ರೆ 100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು. ಇವರಲ್ಲದೆ ಜಾವೇದ್ ಮಿಯಾಂದಾದ್, ಗಾರ್ಡನ್ ಗ್ರೀನಿಡ್ಜ್, ಅಲೆಕ್ ಸ್ಟುವರ್ಟ್, ಇಂಜಮಾಮ್ ಉಲ್ ಹಕ್, ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್, ಹಾಶಿಮ್ ಆಮ್ಲಾ ಮತ್ತು ಜೋ ರೂಟ್ ಈ ಸಾಧನೆ ಮಾಡಿದ್ದಾರೆ.

ರಿಕಿ ಪಾಂಟಿಂಗ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ 100ನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಪಾಂಟಿಂಗ್ ಶತಕ ಗಳಿಸಿದರು. ವಿರಾಟ್ ಕೊಹ್ಲಿಯಿಂದಲೂ ಇದೇ ರೀತಿಯ ಸಾಧನೆಗಳನ್ನು ನಿರೀಕ್ಷಿಸಬಹುದು.

ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 38 ರನ್ ಗಳಿಸುವ ಮೂಲಕ 8000 ಟೆಸ್ಟ್ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮುನ್ನ ಸಚಿನ್, ದ್ರಾವಿಡ್, ಲಕ್ಷ್ಮಣ್, ಸುನಿಲ್ ಗವಾಸ್ಕರ್, ಸೆಹ್ವಾಗ್ ಈ ಅಂಕಿ ಅಂಶವನ್ನು ದಾಟಿದ್ದಾರೆ. ಹೀಗಾಗಿ ನೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳನ್ನು ಬರೆಯುವ ಅವಕಾಶವಿದ್ದು, ಈ ದಾಖಲೆಗಳಲ್ಲಿ ಕೊಹ್ಲಿ ಯಾವ ದಾಖಲೆ ಬರೆಯಲಿದ್ದಾರೆ ಕಾದು ನೋಡಬೇಕಿದೆ.