ವಿರಾಟ್ ಕೊಹ್ಲಿ ಅತ್ಯದ್ಭುತ ಬ್ಯಾಟರ್ ಎಂಬುದು ಗೊತ್ತೇ ಇದೆ. ಅದಕ್ಕೆ ಸಾಕ್ಷಿ ಅವರು ಪೇರಿಸಿರುವ ರನ್ ರಾಶಿ. ಇದರ ಹೊರತಾಗಿ ಕಿಂಗ್ ಕೊಹ್ಲಿ ಅತ್ಯುತ್ತಮ ಫೀಲ್ಡರ್ ಕೂಡ ಹೌದು. ಇದೀಗ ಫೀಲ್ಡಿಂಗ್ ಮೂಲಕವೇ ವಿರಾಟ್ ಕೊಹ್ಲಿ ಹೊಸ ದಾಖಲೆಯತ್ತ ಹೆಜ್ಜೆಯನ್ನಿಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಕ್ಯಾಚ್ಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
ಆಸ್ಟ್ರೇಲಿಯಾ ಪರ 348 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸ್ಟೀವ್ ಸ್ಮಿತ್ 453 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 327 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದೀಗ ಸ್ಮಿತ್ ಅವರನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಭಾರತದ ಪರ ಈವರೆಗೆ 544 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 653 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಅವರು ಒಟ್ಟು 329 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಕ್ಯಾಚ್ ಹಿಡಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಪರ 509 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ದ್ರಾವಿಡ್, 571 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದಾರೆ. ಈ ವೇಳೆ 334 ಕ್ಯಾಚ್ಗಳನ್ನು ಹಿಡಿದು ಭಾರತದ ಅತ್ಯಂತ ಯಶಸ್ವಿ ಫೀಲ್ಡರ್ ಎನಿಸಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಹೆಸರಿನಲ್ಲಿರುವ ಈ ಶ್ರೇಷ್ಠ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಬೇಕಿರುವುದು ಕೇವಲ 6 ಕ್ಯಾಚ್ಗಳು ಮಾತ್ರ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ದಾಖಲೆಯನ್ನು ಕಿಂಗ್ ಕೊಹ್ಲಿ ತನ್ನದಾಗಿಸಿಕೊಳ್ಳುವುದನ್ನು ಎದುರು ನೋಡಬಹುದು.
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ಗಳನ್ನು ಹಿಡಿದ ವಿಶ್ವ ದಾಖಲೆ ಶ್ರೀಲಂಕಾದ ಮಹೇಲ ಜಯವರ್ಧನೆ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 652 ಪಂದ್ಯಗಳನ್ನಾಡಿರುವ ಜಯವರ್ಧನೆ 768 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 440 ಕ್ಯಾಚ್ಗಳನ್ನು ಹಿಡಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.