
ವಿರಾಟ್ ಕೊಹ್ಲಿಯ (Virat Kohli) ಬ್ಯಾಟ್ನಿಂದ 85ನೇ ಶತಕ ಜಸ್ಟ್ ಮಿಸ್ ಆಗಿದೆ. ಅದು ಕೂಡ 7 ರನ್ಗಳ ಅಂತರದಿಂದ. ಹೀಗೆ ಸೆಂಚುರಿ ತಪ್ಪಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 91 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 93 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ಮೂಲಕ ಕೇವಲ 7 ರನ್ಗಳಿಂದ ವಿರಾಟ್ ಕೊಹ್ಲಿ ಶತಕ ವಂಚಿತರಾದರು. ಹೀಗೆ ಶತಕ ತಪ್ಪಿಸಿಕೊಳ್ಳುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 90+ ರನ್ಗಳಿಸಿ ಔಟಾದ ಭಾರತದ ಅತ್ಯಂತ ಹಿರಿಯ ಬ್ಯಾಟರ್ ಎಂಬ ದಾಖಲೆಯೊಂದನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಗವಾಸ್ಕರ್ 92 ರನ್ಗಳಿಸಿ ಶತಕ ವಂಚಿತರಾಗಿದ್ದರು. ಈ ವೇಳೆ ಅವರ ವಯಸ್ಸು 36 ವರ್ಷ, 282 ದಿನಗಳು. ಈ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ 90+ ರನ್ಗಳಿಸಿ ಶತಕ ತಪ್ಪಿಸಿಕೊಂಡ ಅತ್ಯಂತ ಹಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.

ಇದೀಗ 37ನೇ ವಯಸ್ಸಿನಲ್ಲಿ 93 ರನ್ಗಳಿಸಿ ಕೇವಲ 7 ರನ್ಗಳಿಂದ ಶತಕ ವಂಚಿತರಾಗುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಇತಿಹಾಸದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28 ಸಾವಿರ ರನ್ ಪೂರೈಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.