ವಿರಾಟ್ ಕೊಹ್ಲಿಯೇ ನನ್ನ ನಾಯಕತ್ವದಲ್ಲಿ ಆಡಿದ್ದಾರೆ: ರಾಜಕಾರಣಿಯ ಹೇಳಿಕೆ ವೈರಲ್
Tejashwi Yadav And Virat Kohli: ತೇಜಸ್ವಿ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಸುಪುತ್ರ. ರಾಷ್ಟ್ರೀಯ ಜನತಾದಳ ಪಕ್ಷದ ಯುವ ನಾಯಕರಾಗಿ ಗುರುತಿಸಿಕೊಂಡಿರುವ ತೇಜಸ್ವಿ 2022 ರಿಂದ 28 ಜನವರಿ 2024 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
1 / 7
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ. ಈ ಹೇಳಿಕೆಯಲ್ಲಿ ವಿರಾಟ್ ಕೊಹ್ಲಿಯ ಹೆಸರು ಪ್ರಸ್ತಾಪಿಸುವ ಮೂಲಕ ಆರ್‌ಜೆಡಿ ನಾಯಕ ಎಲ್ಲರ ಗಮನ ಸೆಳೆದಿದ್ದಾರೆ.
2 / 7
ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಾಯಕತ್ವದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ತೇಜಸ್ವಿ ಯಾದವ್, ಟೀಮ್ ಇಂಡಿಯಾ ಪರ ಆಡುತ್ತಿರುವ ವಿರಾಟ್ ಕೊಹ್ಲಿ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ. ನಾನು ರಾಜಕೀಯಕ್ಕೆ ಬರುವ ಮುಂಚೆ ಕ್ರಿಕೆಟಿಗನಾಗಿದ್ದೆ. ಅದರ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
3 / 7
ಅಷ್ಟಕ್ಕೂ ತೇಜಸ್ವಿ ಯಾದವ್ ಈ ಬಗ್ಗೆ ಪ್ರಸ್ತಾಪಿಸಲು ಮುಖ್ಯ ಕಾರಣ, ಇತ್ತೀಚೆಗೆ ಜನ್ ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಆರ್‌ಜೆಡಿ ನಾಯಕನನ್ನು 9ನೇ ತರಗತಿಯಲ್ಲಿ ಫೇಲ್ ಆದ ನಾಯಕ ಎಂದು ಹೀಯಾಳಿಸಿದ್ದರು. ಇದೀಗ ರಾಜಕೀಯಕ್ಕೂ ಬರುವ ಮುಂಚೆಯೇ ನಾನು ನಾಯಕನಾಗಿದ್ದೆ ಎಂಬುದನ್ನು ಪ್ರಸ್ತಾಪಿಸಿ ಪ್ರಶಾಂತ್ ಕಿಶೋರ್ಗೆ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ.
4 / 7
ಇನ್ನು ತೇಜಸ್ವಿ ಯಾದವ್ ರಾಜಕೀಯ ಬರುವ ಮುಂಚೆ ಕ್ರಿಕೆಟಿಗನಾಗಿ ಮಿಂಚಿದ್ದರು ಎಂಬುದೇ ಸತ್ಯ. ಅವರು ದೆಹಲಿ ಪರ ಅಂಡರ್ 15 ಮತ್ತು ಅಂಡರ್ 19 ಪಂದ್ಯಗಳನ್ನಾಡಿದ್ದರು. ಅಲ್ಲದೆ ತೇಜಸ್ವಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಕೂಡ ಕಣಕ್ಕಿಳಿದಿದ್ದರು.
5 / 7
ಹಾಗೆಯೇ 2008ರ ಐಪಿಎಲ್ ಮೆಗಾ ಹರಾಜಿನಲ್ಲೂ ತೇಜಸ್ವಿ ಯಾದವ್ ಕಾಣಿಸಿಕೊಂಡಿದ್ದರು. ಈ ವೇಳೆ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಯು 8 ಲಕ್ಷ ರೂ.ಗೆ ಖರೀದಿಸಿತ್ತು. ಅಲ್ಲದೆ 2012 ರವರೆಗೆ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿದ್ದರು. ಇದಾಗ್ಯೂ ಅವರು ಪ್ಲೇಯಿಂಗ್ ಇಲೆವೆನ್ನ ಭಾಗವಾಗಿರಲಿಲ್ಲ.
6 / 7
ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ತೇಜಸ್ವಿ ಯಾದವ್, ನಾನು ಕ್ರಿಕೆಟಿಗನಾಗಿದ್ದೆ ಮತ್ತು ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿರಾಟ್ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ. ಇದರ ಬಗ್ಗೆ ಯಾರಾದರೂ ಮಾತನಾಡಿದ್ದಾರೆಯೇ? ಅದನ್ನೆಲ್ಲಾ ಮಾತನಾಡುವುದಿಲ್ಲ. ವೃತ್ತಿಪರನಾಗಿ ನಾನು ಉತ್ತಮ ಕ್ರಿಕೆಟ್ ಆಡಿದ್ದೇನೆ. ನನ್ನ ಜೊತೆಗಿದ್ದ ಅನೇಕರು ಟೀಮ್ ಇಂಡಿಯಾ ಪರ ಕೂಡ ಆಡಿದ್ದಾರೆ. ನನ್ನ ಅಸ್ಥಿರಜ್ಜು ಮೂಳೆಗಳು ಮುರಿತಕ್ಕೊಳಗಾದ ಕಾರಣ ನಾನು ಕ್ರಿಕೆಟ್ ಅನ್ನು ತ್ಯಜಿಸಬೇಕಾಯಿತು ಎಂದು ತಿಳಿಸಿದ್ದಾರೆ.
7 / 7
ಅಂದಹಾಗೆ ತೇಜಸ್ವಿ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಸುಪುತ್ರ. ರಾಷ್ಟ್ರೀಯ ಜನತಾದಳ ಪಕ್ಷದ ಯುವ ನಾಯಕರಾಗಿ ಗುರುತಿಸಿಕೊಂಡಿರುವ ತೇಜಸ್ವಿ 2022 ರಿಂದ 28 ಜನವರಿ 2024 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಇದೀಗ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಪ್ರಸ್ತಾಪಿಸಿ ತೇಜಸ್ವಿ ಯಾದವ್ ಸಖತ್ ಸುದ್ದಿಯಲ್ಲಿದ್ದಾರೆ.
Published On - 12:53 pm, Sun, 15 September 24