ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 100 ರನ್ಗಳ ಅಮೋಘ ಗೆಲುವು ಕಂಡಿತು. ಬ್ಯಾಟರ್ಗಳ ವೈಫಲ್ಯದ ನಡುವೆಯೂ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಆಟದ ನೆರವಿನಿಂದ ಭಾರತ 229 ರನ್ ಕಲೆಹಾಕಿದರೆ, ಇಂಗ್ಲೆಂಡ್ 129 ರನ್ಗಳಿಗೆ ಆಲೌಟ್ ಆಯಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ದಿಢೀರನೇ ವಿಕೆಟ್ ಕಳೆದುಕೊಂಡಿತು. 40 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ಗಳು ಬಿದ್ದವು. ಅದರಲ್ಲೂ ಭರ್ಜರಿ ಫಾರ್ಮ್ನಲ್ಲಿದ್ದ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ತಮ್ಮ ಕಳಪೆ ಬ್ಯಾಟಿಂಗ್ನಿಂದ ಸ್ವತಃ ಕೊಹ್ಲಿಯೇ ಕೋಪಗೊಂಡರು.
ಇಂಗ್ಲೆಂಡ್ ವಿರುದ್ಧ ಡಕ್ ಔಟ್ ಆದ ನಂತರ ಕೋಪಗೊಂಡ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಸೋಫಾಗೆ ಗುದ್ದಿದ್ದಾರೆ. ಒಂಬತ್ತು ಎಸೆತಗಳಲ್ಲಿ ಕೊಹ್ಲಿ ಒಂದೂ ರನ್ ಗಳಿಸಲಿಲ್ಲ. ಡೇವಿಡ್ ವಿಲ್ಲಿ ಬೌಲಿಂಗ್ನಲ್ಲಿ ಮಿಡ್ ಆಫ್‌ನಲ್ಲಿ ಬೆನ್ ಸ್ಟೋಕ್ಸ್‌ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾದರು. ಕೊಹ್ಲಿಯ ಫಾರ್ಮ್ ಅನ್ನು ಗಮನಿಸಿದರೆ, ಸಚಿನ್ ತೆಂಡೂಲ್ಕರ್ ಅವರ 49ನೇ ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ನಿರೀಕ್ಷೆ ಹುಸಿಯಾಯಿತು.
ಗಿಲ್, ಕೊಹ್ಲಿ ಹಾಗೂ ಅಯ್ಯರ್ ನಿರ್ಗಮನದ ಬಳಿಕ ಕೆಎಲ್ ರಾಹುಲ್ (39) ಜೊತೆಯಾದ ರೋಹಿತ್ ಶರ್ಮಾ ತಂಡಕ್ಕೆ ಆಧಾರವಾಗಿ ನಿಂತರು. ಈ ಜೋಡಿ 91 ರನ್ಗಳ ಕಾಣಿಕೆ ನೀಡಿತು. ರೋಹಿತ್ 101 ಎಸೆತಗಳಲ್ಲಿ 3 ಸಿಕ್ಸರ್, 10 ಫೋರ್ನೊಂದಿಗೆ 87 ರನ್ ಚಚ್ಚಿದರು.
ಬಳಿಕ ರನ್ ಹೆಚ್ಚಿಸುವ ಜವಾಬ್ದಾರಿ ಹೊತ್ತ ಸೂರ್ಯಕುಮಾರ್ ಯಾದವ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸೂರ್ಯ 47 ಎಸೆತಗಳಲ್ಲಿ 49 ರನ್ಗೆ ಔಟಾದರು. ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ 34.5 ಓವರ್ಗಳಲ್ಲಿ ಕೇವಲ 129 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ಹಾಗೂ ಜಸ್ಪ್ರಿತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರು.