
IPL 2023 RCB vs RR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು. ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಎಸೆದ ಎಸೆತವನ್ನು ಗುರುತಿಸುವಲ್ಲಿ ಎಡವಿದ ಕಿಂಗ್ ಕೊಹ್ಲಿ ಎಲ್ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು.

ಈ ಔಟ್ನೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ಬಾರಿ ಗೋಲ್ಡನ್ ಡಕ್ಗೆ ಔಟಾದ ಫುಲ್ ಟೈಮ್ ಬ್ಯಾಟರ್ ಎಂಬ ಅನಗತ್ಯ ದಾಖಲೆಯೊಂದು ವಿರಾಟ್ ಕೊಹ್ಲಿ ಪಾಲಾಗಿದೆ.

ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ ಒಟ್ಟು 7 ಬಾರಿ ಮೊದಲ ಎಸೆತಕ್ಕೆ ಔಟಾಗಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ಗೋಲ್ಡನ್ ಡಕ್ಗೆ ಔಟಾದ ಭಾರತೀಯ ಬ್ಯಾಟರ್ ಹಾಗೂ ಫುಲ್ ಟೈಮ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಇದಾಗ್ಯೂ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ಗೋಲ್ಡನ್ ಡಕ್ಗೆ ಔಟಾದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ರಶೀದ್ ಖಾನ್. ಅಫ್ಘಾನ್ ಆಟಗಾರ ಇದುವರೆಗೆ 10 ಬಾರಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು ಸುನಿಲ್ ನರೈನ್ 7 ಬಾರಿ ಹಾಗೂ ಹರ್ಭಜನ್ ಸಿಂಗ್ ಕೂಡ 7 ಬಾರಿ ಮೊದಲ ಎಸೆತದಲ್ಲಿ ಔಟಾಗಿದ್ದಾರೆ. ಆದರೆ ಈ ಮೂವರು ಆಟಗಾರರು ಫುಲ್ ಟೈಮ್ ಬ್ಯಾಟರ್ ಅಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ರಶೀದ್ ಖಾನ್, ಸುನಿಲ್ ನರೈನ್ ಆಲ್ರೌಂಡರ್ಗಳಾಗಿದ್ದರೆ, ಹರ್ಭಜನ್ ಸಿಂಗ್ ಬೌಲರ್.

ಇತ್ತ ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದಲೂ ಫುಲ್ ಟೈಮ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್ಗಳಲ್ಲಿ ಅತೀ ಹೆಚ್ಚು ಬಾರಿ ಗೋಲ್ಡನ್ ಡಕ್ಗೆ ಔಟಾಗಿ ಇದೀಗ ಅತ್ಯಂತ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿದ್ದ ವಿರಾಟ್ ಕೊಹ್ಲಿ ಇದೀಗ ಗೋಲ್ಡನ್ ಡಕ್ಗೆ ಔಟಾಗಿ ಅನಗತ್ಯ ದಾಖಲೆಯೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.