Updated on: Apr 23, 2023 | 9:52 PM
IPL 2023: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ್ದ ಅರ್ಜುನ್ ಇದೀಗ ದುಬಾರಿ ಓವರ್ ಮೂಲಕ ಹೀನಾಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್ ಕೇವಲ 5 ರನ್ ನೀಡಿ ಶುಭಾರಂಭ ಮಾಡಿದ್ದರು.
ಇದಾದ ಬಳಿಕ 7ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಅರ್ಜುನ್ ತೆಂಡೂಲ್ಕರ್ 12 ರನ್ ನೀಡಿ ದುಬಾರಿಯಾದರು. ಇದಾಗ್ಯೂ ಪ್ರಭ್ಸಿಮ್ರಾನ್ ಸಿಂಗ್ ವಿಕೆಟ್ ಪಡೆಯುವ ಮೂಲಕ ಈ ಓವರ್ನಲ್ಲಿ ಯಶಸ್ಸು ತಂದುಕೊಟ್ಟಿದ್ದರು.
ಆ ನಂತರ 16ನೇ ಓವರ್ ವೇಳೆ ನಾಯಕ ರೋಹಿತ್ ಶರ್ಮಾ ಅರ್ಜುನ್ ಕೈಗೆ ಚೆಂಡು ನೀಡಿದರು. ಆತ್ಮ ವಿಶ್ವಾಸದಿಂದಲೇ ಮೂರನೇ ಓವರ್ ಆರಂಭಿಸಿದ ಅರ್ಜುನ್ ಅವರ ಮೊದಲ ಎಸೆತವನ್ನು ಸ್ಯಾಮ್ ಕರನ್ ಸಿಕ್ಸರ್ಗೆ ಅಟ್ಟಿದರು. 2ನೇ ಎಸೆತ ವೈಡ್. ಮರು ಎಸೆತದಲ್ಲಿ ಫೋರ್. 3ನೇ ಎಸೆತದಲ್ಲಿ ಸ್ಯಾಮ್ ಕರನ್ 1 ರನ್ ಓಡಿದರು.
4ನೇ ಎಸೆತದಲ್ಲಿ ಹರ್ಪ್ರೀತ್ ಸಿಂಗ್ ಬ್ಯಾಟ್ನಿಂದ ಫೋರ್ ಮೂಡಿಬಂತು. ಇನ್ನು 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. 6ನೇ ಎಸೆತ ನೋಬಾಲ್-ಫೋರ್. ಮರು ಎಸೆತದಲ್ಲಿ ಹರ್ಪ್ರೀತ್ ಸಿಂಗ್ ಮತ್ತೊಂದು ಫೋರ್ ಬಾರಿಸಿದರು. ಇದರೊಂದಿಗೆ ಅರ್ಜುನ್ ತೆಂಡೂಲ್ಕರ್ ಓವರ್ನಲ್ಲಿ ಬರೋಬ್ಬರಿ 31 ರನ್ ಮೂಡಿಬಂತು.
ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ಅರ್ಜುನ್ ತೆಂಡೂಲ್ಕರ್ (31 ರನ್) ಯಶ್ ದಯಾಳ್ ಜೊತೆ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ 6ನೇ ದುಬಾರಿ ಓವರ್ ಮಾಡಿದ ಕೆಟ್ಟ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.
ಇನ್ನು ಐಪಿಎಲ್ನಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ದಾಖಲೆ ಪ್ರಶಾಂತ್ ಪರಮೇಶ್ವರ್ ಹಾಗೂ ಹರ್ಷಲ್ ಪಟೇಲ್ ಹೆಸರಿನಲ್ಲಿದೆ. 2011 ರಲ್ಲಿ ಆರ್ಸಿಬಿ ವಿರುದ್ಧ ಪ್ರಶಾಂತ್ 37 ರನ್ ನೀಡಿದರೆ, ಹರ್ಷಲ್ ಪಟೇಲ್ 2021 ರಲ್ಲಿ ಸಿಎಸ್ಕೆ ವಿರುದ್ದ 37 ರನ್ ಚಚ್ಚಿಸಿಕೊಂಡಿದ್ದರು.