Updated on: Apr 23, 2023 | 10:53 PM
IPL 2023: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಬ್ಯಾಟರ್ ಅಜಿಂಕ್ಯ ರಹಾನೆ ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಅಂತಿಂಥ ಅಬ್ಬರವಲ್ಲ..ಸಿಡಿಲಬ್ಬರ..!
ಹೌದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸಿಎಸ್ಕೆ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ಕೆಕೆಆರ್ ತಂಡದ ಲೆಕ್ಕಚಾರಗಳನ್ನು ಆರಂಭದಲ್ಲೇ ತಲೆಕೆಳಗಾಗಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್ ಗಾಯಕ್ವಾಡ್ 20 ಎಸೆತಗಳಲ್ಲಿ 35 ರನ್ ಬಾರಿಸಿ ಔಟಾದರು. ಆದರೆ ಅದಕ್ಕೂ ಮುನ್ನ ಕಾನ್ವೆ ಜೊತೆ 7.2 ಓವರ್ಗಳಲ್ಲಿ 73 ರನ್ಗಳ ಜೊತೆಯಾಟವಾಡಿದ್ದರು. ಇದಾದ ಬಳಿಕ ಕಾನ್ವೆ ಹಾಗೂ ಅಜಿಂಕ್ಯ ರಹಾನೆ ಜೊತೆಯಾದರು.
ಒಂದೆಡೆ ಕಾನ್ವೆ ಅಬ್ಬರ ಶುರು ಮಾಡುತ್ತಿದ್ದಂತೆ, ಮತ್ತೊಂದೆಡೆ ರಹಾನೆ ಸಿಡಿಲಬ್ಬರದ ಆರಂಭಿಸಿದ್ದರು. ಇತ್ತ ಇವರಿಬ್ಬರ ಬಿರುಸಿನ ಬ್ಯಾಟಿಂಗ್ ನಡುವೆ ಕೆಕೆಆರ್ ಬೌಲರ್ಗಳು ಪರದಾಡಿದರು. ಇದರ ನಡುವೆ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 56 ರನ್ ಬಾರಿಸಿ ಕಾನ್ವೆ ಔಟಾದರು.
ಆದರೆ ಮತ್ತೊಂದೆಡೆ ಅದಾಗಲೇ ಬಿರುಗಾಳಿ ಬ್ಯಾಟಿಂಗ್ಗೆ ಒತ್ತು ನೀಡಿದ್ದ ರಹಾನೆ ಕೆಕೆಆರ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 24 ಎಸೆತಗಳಲ್ಲಿ ಅಜಿಂಕ್ಯ ರಹಾನೆ ಬ್ಯಾಟ್ನಿಂದ ಅರ್ಧಶತಕ ಮೂಡಿಬಂತು.
ಮತ್ತೊಂದೆಡೆ ರಹಾನೆಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಕೂಡ ಅಬ್ಬರಿಸಲಾರಂಭಿಸಿದರು. ಕೆಕೆಆರ್ ಬೌಲರ್ಗಳನ್ನು ಮನಸ್ಸೊ ಇಚ್ಛೆ ದಂಡಿಸಿದ ದುಬೆ ಕೇವಲ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ನೊಂದಿಗೆ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಅಜಿಂಕ್ಯ ರಹಾನೆ ಅಬ್ಬರ ಮಾತ್ರ ಕಮ್ಮಿಯಾಗಿರಲಿಲ್ಲ. ಅರ್ಧಶತಕದ ಬಳಿಕ ಬೀಸ್ಟ್ ಮೋಡ್ನಲ್ಲಿ ಕಾಣಿಸಿಕೊಂಡ ರಹಾನೆ ತೂಫಾನ್ ಬ್ಯಾಟಿಂಗ್ ಮುಂದುವರೆಸಿದರು. ಕೊನೆಯವರೆಗೂ ಕ್ರೀಸ್ ಕಚ್ಚಿ ನಿಂತು ಆಡಿದ ಅಜಿಂಕ್ಯ ರಹಾನೆ 29 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 71 ರನ್ ಬಾರಿಸಿದರು. ಪರಿಣಾಮ 20 ಓವರ್ಗಳಲ್ಲಿ ಸಿಎಸ್ಕೆ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 235 ಕ್ಕೆ ಬಂದು ನಿಂತಿತು.
ಒಟ್ಟಿನಲ್ಲಿ ತನ್ನನ್ನು ಟೆಸ್ಟ್ ಕ್ರಿಕೆಟಿಗ ಎಂದು ಬಣ್ಣಿಸುತ್ತಿದ್ದವರಿಗೆ ಈ ಬಾರಿಯ ಐಪಿಎಲ್ ಮೂಲಕ ಅಜಿಂಕ್ಯ ರಹಾನೆ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಇದೀಗ 29 ಎಸೆತಗಳಲ್ಲಿ 71 ರನ್ ಚಚ್ಚಿರುವುದು.