Virat Kohli vs Gautam Gambhir: ಸೋಮವಾರ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 127 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಲಕ್ನೋ ತಂಡವು 108 ರನ್ಗಳಿಸಿ 18 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿಯಾಗಿ ಸಂಭ್ರಮಿಸಿದರೆ, ಸೋಲಿನ ಹತಾಶೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೆಲ ಆಟಗಾರರು ಹಾಗೂ ಮೆಂಟರ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ ಈ ಮಾತಿನ ಚಕಮಕಿಯಲ್ಲಿ ಕೊಹ್ಲಿ ಹಾಗೂ ಗಂಭೀರ್ ಏನು ಮಾತನಾಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ತಂಡದ ಜೊತೆಗಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಮಾಹಿತಿ ಪ್ರಕಾರ, ಪಂದ್ಯದ ಬಳಿಕ ಕೈಲ್ ಮೇಯರ್ಸ್ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದ್ದರು. ನೀವು ಯಾಕೆ ಪದೇ ಪದೇ ಯಾಕೆ ನಮ್ಮ ಆಟಗಾರರನ್ನು ನಿಂದಿಸುತ್ತಿದ್ದೀರಿ ಎಂದು ಕೇಳಿದ್ದರು. ಈ ವೇಳೆ ಆಗಮಿಸಿದ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಕೈಲ್ ಮೇಯರ್ಸ್ ಅವರನ್ನು ಕರೆದುಕೊಂಡು ಹೋದರು.
ಈ ವೇಳೆ ವಿರಾಟ್ ಕೊಹ್ಲಿ ಏನೋ ಗೊಣಗಿರುವುದನ್ನು ಗ್ರಹಿಸಿದ ಗಂಭೀರ್, ಅದೇನು ಹೇಳುತ್ತಿದ್ದೀಯಾ ಹೇಳು ಎಂದರು. ಈ ವೇಳೆ ನಾನು ನಿಮಗೆ ಏನನ್ನೂ ಹೇಳದಿರುವಾಗ, ನೀವ್ಯಾಕೆ ಮಧ್ಯ ಬರುತ್ತಿದ್ದೀರಿ ಎಂದು ವಿರಾಟ್ ಕೊಹ್ಲಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ನೀವು ನನ್ನ ಆಟಗಾರನನ್ನು ನಿಂದಿಸಿದ್ದೀರಿ ಅಂದರೆ, ಅದು ನನ್ನ ಫ್ಯಾಮಿಲಿಗೆ (ಟೀಮ್) ಬೈದಂತೆ ಎಂದರು. ಇದರಿಂದ ರೊಚ್ಚಿಗೆದ್ದ ವಿರಾಟ್ ಕೊಹ್ಲಿ ಖಡಕ್ ಉತ್ತರ ನೀಡಿದ್ದರು.
ನಿಮಗೆ ನಾನು ನಿಮ್ಮ ಫ್ಯಾಮಿಲಿಗೆ (ಟೀಮ್) ಬೈದಂತೆ ಅನಿಸಿದ್ರೆ, ಮೊದಲು ನೀವು ನಿಮ್ಮ ಫ್ಯಾಮಿಲಿ (ಟೀಮ್) ಯನ್ನು ಸರಿಯಾಗಿ ಸಂಭಾಳಿಸಿ ಎಂದು ವಿರಾಟ್ ಕೊಹ್ಲಿ ಖಾರವಾಗಿ ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿಯ ಈ ಮಾತಿನಿಂದ ಮತ್ತಷ್ಟು ಕುಪಿತಗೊಂಡ ಗೌತಮ್ ಗಂಭೀರ್, ಅದನ್ನು ನಾನು ನಿನ್ನಿಂದ ಕಲಿಯಬೇಕಾ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಾಗಲೇ ಉಳಿದ ಆಟಗಾರರು ಇಬ್ಬರನ್ನು ದೂರ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದ ಮಾತಿನ ಚಕಮಕಿ. ಈ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಐಪಿಎಲ್ ಆಡಳಿತ ಮಂಡಳಿ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದ ಗೌತಮ್ ಗಂಭೀರ್ಗೆ ಲಕ್ನೋ ಮೈದಾನದಲ್ಲಿ ಭರ್ಜರಿ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಇದೇ ಖುಷಿಯಲ್ಲಿ ಆರ್ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಯ ನಡೆಗೆ ಬಹುಪರಾಕ್ ಅನ್ನುತ್ತಿದ್ದಾರೆ.