Updated on: Feb 15, 2023 | 8:32 PM
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರ ವಿರುದ್ಧ ಖಾಸಗಿ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಹಲವು ವಿಚಾರಗಳನ್ನು ಬಹಿರಂಗವಾಗಿದೆ. ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆಯಿದ್ದ ಜಿದ್ದಾಜಿದ್ದಿಗೆ ಕಾರಣವೇನು ಎಂಬುದನ್ನೂ ಸಹ ಸ್ಪಷ್ಟಪಡಿಸಿದ್ದಾರೆ.
2021-22 ರಲ್ಲಿ ಟೀಮ್ ಇಂಡಿಯಾದ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಲಾಗಿತ್ತು. ಆ ಬಳಿಕ ಕೊಹ್ಲಿ ಹಾಗೂ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮುಸುಕಿನ ಗುದ್ದಾಟ ಆರಂಭವಾಯಿತು. ಅದರಲ್ಲೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನನಗೆ ತಿಳಿಸದೇ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂದು ಕೊಹ್ಲಿ ಬಿಸಿಸಿಐ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆಲ್ಲಾ ಕಾರಣ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಣ ಅಹಂನ ಸಂಘರ್ಷ ಎಂದಿದ್ದಾರೆ ಚೇತನ್ ಶರ್ಮಾ. ಕಿಂಗ್ ಕೊಹ್ಲಿ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದಂತೆ ಭಾರತೀಯ ಕ್ರಿಕೆಟ್ ಮಂಡಳಿಗಿಂತ ತಾನು ದೊಡ್ಡವನು ಎಂದು ಭಾವಿಸಿದ್ದರು. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕತ್ವ ಕೂಡ ಕೆಳಗಿಳಿಸಲಾಯಿತು.
ಆದರೆ ವಿರಾಟ್ ಕೊಹ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮನ್ನು ನಾಯಕತ್ವದಿಂದ ತೆಗೆದು ಹಾಕಿದ್ದಾರೆ ಎಂದು ಭಾವಿಸಿದರು. ಅಲ್ಲದೆ ಅವರಿಗೆ ಪಾಠ ಕಲಿಸಲೆಂದೇ ಮಾಧ್ಯಮದ ಮುಂದೆ ಮಾನಹಾನಿ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದರು. ಆದರೆ ಅದರಲ್ಲೂ ಕೊಹ್ಲಿಗೂ ಹಿನ್ನಡೆಯಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಿದನ್ನು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಮರ್ಥಿಸಿದ್ದರು. ಸೀಮಿತ ಓವರ್ಗಳ ತಂಡಕ್ಕೆ ಒಬ್ಬನೇ ನಾಯಕರು ಇರಬೇಕೆಂದು ಆಯ್ಕೆ ಮಂಡಳಿ ನಿರ್ಧರಿಸಿದೆ. ಹೀಗಾಗಿ ಟಿ20 ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿಯನ್ನು ಏಕದಿನ ಟೀಮ್ನ ಕಪ್ತಾನನ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದಿದ್ದರು. ಈ ಬಗ್ಗೆ ವಿರಾಟ್ ಕೊಹ್ಲಿಯ ಜೊತೆಗೂ ಚರ್ಚಿಸಿದ್ದೇವೆ. ಅವರಿಗೆ ವಿಷಯವನ್ನು ಮನವರಿಕೆ ಮಾಡಿದ್ದೇವೆ ಎಂದು ಗಂಗೂಲಿ ಹೇಳಿದ್ದರು.
ಆದರೆ ಅಚ್ಚರಿ ಎಂಬಂತೆ ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ತೆರಳುವ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ನನಗೆ ಯಾವುದೇ ವಿಚಾರವನ್ನು ತಿಳಿಸಿಲ್ಲ. ಕೇವಲ 1 ಗಂಟೆ ಮೊದಲು ಚೇತನ್ ಶರ್ಮಾ ಕರೆ ಮಾಡಿ ನಾಯಕತ್ವದಿಂದ ತೆಗೆದು ಹಾಕುತ್ತಿರುವ ವಿಷಯ ತಿಳಿಸಿದ್ದರು ಎಂದು ಆರೋಪಿಸಿದ್ದರು. ಇತ್ತ ಕೊಹ್ಲಿಯ ಈ ಬಹಿರಂಗ ಹೇಳಿಕೆಯಿಂದ ಸೌರವ್ ಗಂಗೂಲಿ ಮುಜುಗರಕ್ಕೊಳಗಾಗಿದ್ದರು.
ಇದೀಗ ರಹಸ್ಯ ಕಾರ್ಯಾಚರಣೆಯ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿರುವ ಚೇತನ್ ಶರ್ಮಾ, ಅಂದು ಆಯ್ಕೆ ಸಮಿತಿಯೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಿದ್ದು. ಇದಕ್ಕೆ ಮುಖ್ಯ ಕಾರಣ ಟಿ20 ಹಾಗೂ ಏಕದಿನ ತಂಡವನ್ನು ಒಬ್ಬರೇ ಮುನ್ನಡೆಸಬೇಕೆಂಬುದಾಗಿದೆ.
ಆದರೆ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ಸರಣಿಗೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಾಕೆ ಹೇಳಿದರು?. ಅಲ್ಲಿ ಈ ವಿಷಯವನ್ನು ತರುವ ಅಗತ್ಯವಿರಲಿಲ್ಲ. ಮಾತುಕತೆ ನಡೆದಿದ್ದು ಸತ್ಯ. ಎಂಟರಿಂದ ಒಂಬತ್ತು ಜನ ಕುಳಿತು ಮಾತುಕತೆ ನಡೆದಿತ್ತು. ಇದಾಗ್ಯೂ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ನನಗೆ ತಿಳಿಸದೇ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದಿದ್ದರು. ಆತ ಏಕೆ ಸುಳ್ಳು ಹೇಳಿದ ಎಂಬುದು ಇಂದಿಗೂ ತಿಳಿದಿಲ್ಲ ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆ ಎದಿದ್ದ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.