
ಭಾರತ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಭಾರತ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಮುನ್ನಡೆ ಸಾಧಿಸಿದ ನಂತರವೂ ಇಂಗ್ಲೆಂಡ್ ಗೆದ್ದು ಎಲ್ಲರಿಗೂ ಆಘಾತ ನೀಡಿತು. ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಪ್ರಸ್ತುತ ಉಭಯ ತಂಡಗಳು ಗೆಲುವಿಗೆ ಹೋರಾಡುತ್ತಿದೆ.

ಮೊದಲ ಎರಡು ಟೆಸ್ಟ್‌ಗಳಿಗೆ ಅಲಭ್ಯರಾಗಿದ್ದ ದೊಡ್ಡ ಹೆಸರುಗಳಲ್ಲಿ ಒಬ್ಬರು ಬ್ಯಾಟರ್ ವಿರಾಟ್ ಕೊಹ್ಲಿ. ಇವರು ಮೂರನೇ ಟೆಸ್ಟ್ ಆಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಕೆಟ್ಟ ಸುದ್ದಿ ಹೊರಬಿದ್ದಿದೆ. ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ವಿರಾಟ್ ಮೂರನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ.

ವಿರಾಟ್ ಕೊಹ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡ ನಂತರ ಇದೀಗ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಲಭ್ಯತೆಯ ಬಗ್ಗೆ ಬಿಸಿಸಿಐ ಆಯ್ಕೆದಾರರಿಗೆ ಇನ್ನೂ ತಿಳಿದಿಲ್ಲ. ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡರು.

ಕ್ರಿಕ್‌ಬಜ್‌ನ ಹಿಂದಿನ ವರದಿಯಲ್ಲಿ, ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಆಡುವ ಬಗ್ಗೆ ಖಚಿತವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಎಬಿ ಡಿವಿಲಿಯರ್ಸ್ ಅವರು ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಅವರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

"ನನಗೆ ತಿಳಿದಿರುವಂತೆ ಅವರು ಚೆನ್ನಾಗಿದ್ದಾರೆ. ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುತ್ತಿದ್ದಾರೆ, ಅದಕ್ಕಾಗಿಯೇ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಾನು ಬೇರೆ ಯಾವುದನ್ನೂ ಖಚಿತಪಡಿಸಲು ಹೋಗುತ್ತಿಲ್ಲ. ನಿಜಕ್ಕೂ ಕೊಹ್ಲಿ ಗ್ರೇಟ್ ಮ್ಯಾನ್. ಅವರು ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ. ಇದೇ ಕಾರಣದಿಂದಾಗಿ ಅವರು ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ,'' ಎಂದು ಎಬಿಡಿ ಹೇಳಿದ್ದಾರೆ.

ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವ ಕಾರಣ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಂದಲೂ ಹೊರಗುಳಿದರೂ ಅಚ್ಚರಿಪಡಬೇಕಿಲ್ಲ. ಹೀಗಾಗಿ ಈ ಸರಣಿಯಲ್ಲಿ ಕಿಂಗ್ ಕೊಹ್ಲಿಯ ಕಂಬ್ಯಾಕ್ ಅನ್ನು ನಿರೀಕ್ಷಿಸುವಂತಿಲ್ಲ.