Updated on: Dec 06, 2022 | 7:31 PM
ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಕೂಡ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ ತಂದೆಯಂತೆ ಡ್ಯಾಶಿಂಗ್ ಬ್ಯಾಟ್ಸಮನ್ ಆಗಿ ಎಂಬುದು ವಿಶೇಷ.
ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ದೆಹಲಿ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಸೆಹ್ವಾಗ್ ಅವರ ಸುಪುತ್ರ ಆರ್ಯವೀರ್ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂಡರ್ 16 ಕ್ರಿಕೆಟ್ ಟೂರ್ನಿಗೆ ಸೆಹ್ವಾಗ್ ಅವರ ಪುತ್ರ ಎಂಟ್ರಿ ಕೊಟ್ಟಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ಆಗಿರುವ ಆರ್ಯವೀರ್ ಅವರ ಬ್ಯಾಟಿಂಗ್ ಶೈಲಿ ತಂದೆಯಂತೆ ಇರುವುದು ವಿಶೇಷ. ಅದರಲ್ಲೂ ಏರಿಯಲ್ ಶಾಟ್ಗಳ ಮೂಲಕ ಅಬ್ಬರಿಸುವ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್ ಮೂಲಕ ತಂದೆಯ ಹಾದಿಯಲ್ಲೇ ಸಾಗಲು ಆರ್ಯವೀರ್ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.
15 ವರ್ಷದ ಆರ್ಯವೀರ್ ಸದ್ಯ ಅಂಡರ್ 16 ವಿಜಯ್ ಮರ್ಚಂಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದು, ಇದಾಗ್ಯೂ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ಬಿಹಾರ ವಿರುದ್ಧ ನಡೆದ ಈ ಪಂದ್ಯದಲ್ಲಿ ದೆಹಲಿ ತಂಡದ ಪರ ಆರ್ಯವೀರ್ ಕಣಕ್ಕಿಳಿದಿರಲಿಲ್ಲ. ಇದಾಗ್ಯೂ ಮುಂಬರುವ ಪಂದ್ಯಗಳ ಮೂಲಕ ವೀರೇಂದ್ರ ಸೆಹ್ವಾಗ್ ಪುತ್ರ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.
ಟೀಮ್ ಇಂಡಿಯಾ ಪರ ಡ್ಯಾಶಿಂಗ್ ಓಪನರ್ ಆಗಿ ಹಲವು ದಾಖಲೆಗಳನ್ನು ಬರೆದಿರುವ ವೀರೇಂದ್ರ ಸೆಹ್ವಾಗ್ ಒಟ್ಟು 18,641 ರನ್ ಕಲೆಹಾಕಿದ್ದಾರೆ. ಇದೀಗ ಅಪ್ಪನ ಹಾದಿಯಲ್ಲಿರುವ ಆರ್ಯವೀರ್ ಸೆಹ್ವಾಗ್ ಮುಂದೊಂದು ದಿನ ತಂದೆಯ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.