Updated on: Oct 21, 2021 | 12:08 PM
2007, ಸೆಪ್ಟೆಂಬರ್ 24...ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟೀಮ್ ಇಂಡಿಯಾ ಚೊಚ್ಚಲ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಈ ಐತಿಹಾಸಿಕ ವಿಜಯದ ಭಾಗವಾಗಿದ್ದ ಆಟಗಾರರು ಈಗ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎಂಬುದರ ಇಣುಕು ನೋಟ ಇಲ್ಲಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ: ಟಿ20 ವಿಶ್ವಕಪ್ ಮೂಲಕ ಧೋನಿ ಮೊದಲ ಬಾರಿಗೆ ಟೀಮ್ ಇಂಡಿಯಾ ತಂಡದ ನಾಯಕತ್ವ ವಹಿಸಿದ್ದರು. ಇದೀಗ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ಅವರ ನಾಯಕತ್ವದಲ್ಲಿ ಸಿಎಸ್ಕೆ ತಂಡವು ಐಪಿಎಲ್ -2021 ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದೆ. ಹಾಗೆಯೇ ಟಿ20 ವಿಶ್ವಕಪ್ 2021 ರಲ್ಲಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿದ್ದಾರೆ.
ಯುವರಾಜ್ ಸಿಂಗ್: 2007ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯುವರಾಜ್ ಸಿಂಗ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಒಂದು ಓವರ್ನಲ್ಲಿ ಸಿಡಿಸಿದ ಆರು ಸಿಕ್ಸರ್ ಗಳನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಇದೀಗ ಯುವರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಅಲ್ಲದೆ 2019 ರವರೆಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ಕೆಲವು ಸಣ್ಣ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ವರ್ಲ್ಡ್ ರೋಡ್ ಸಿರೀಸ್ನಲ್ಲಿ ಆಡಿದ್ದರು.
ವೀರೇಂದ್ರ ಸೆಹ್ವಾಗ್: ಅಂದಿನ ತಂಡದಲ್ಲಿದ್ದ ಅನುಭವಿ ಆಟಗಾರರಲ್ಲಿ ಸೆಹ್ವಾಗ್ ಕೂಡ ಒಬ್ಬರು. ಗಾಯದಿಂದಾಗಿ ಅವರು ಫೈನಲ್ ಆಡಲು ಸಾಧ್ಯವಾಗಲಿಲ್ಲ. ಆದರೆ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಸೆಹ್ವಾಗ್ ಅದ್ಭುತ ಬ್ಯಾಟಿಂಗ್ ಮಾಡಿದರು. ಸದ್ಯ ಸೆಹ್ವಾಗ್ ಕಮೆಂಟೇಟರ್ ಹಾಗೂ ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೌತಮ್ ಗಂಭೀರ್: ಟಿ20 ವಿಶ್ವಕಪ್ ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಗಂಭೀರ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸದ್ಯ ಗಂಭೀರ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಅದರ ಜೊತೆಗೆ ಕಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಬಿನ್ ಉತ್ತಪ್ಪ: ಅಂದಿನ ಟಿ20 ತಂಡದಲ್ಲಿ ರಾಬಿನ್ ಉತ್ತಪ್ಪ ಸ್ಪೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದರೂ ಉತ್ತಪ್ಪ ಇನ್ನೂ ನಿವೃತ್ತಿ ಘೋಷಿಸಿಲ್ಲ. ಇದೀಗ ಸಿಎಸ್ಕೆ ತಂಡದ ಭಾಗವಾಗಿರುವ ರಾಬಿನ್ ಈ ಬಾರಿ ಚೆನ್ನೈ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರೋಹಿತ್ ಶರ್ಮಾ: ಅಂದು ತಂಡದಲ್ಲಿದ್ದ ಯುವ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಇದೀಗ ಟೀಮ್ ಇಂಡಿಯಾದ ಉಪನಾಯಕರಾಗಿರುವ ಹಿಟ್ಮ್ಯಾನ್ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆಡುತ್ತಿರುವ ಅಂದಿನ ತಂಡದ ಏಕೈಕ ಸದಸ್ಯ ಎಂಬುದು ವಿಶೇಷ.
ಯೂಸುಫ್ ಪಠಾಣ್: 2007 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದ ಯೂಸುಫ್ ಪಠಾಣ್, ಆ ಬಳಿಕ ಟಿ20 ಕ್ರಿಕೆಟ್ನಲ್ಲಿ ಹಿಂತಿರುಗಿ ನೋಡಿಲ್ಲ. 2019 ರವರೆಗೆ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದ ಪಠಾಣ್, ಇದೀಗ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಅಬುಧಾಬಿ ಟಿ10 ಲೀಗ್ -2021 ರಲ್ಲಿ ಮರಾಠಾ ಅರೇಬಿಯನ್ಸ್ ಪರ ಆಡಲಿದ್ದಾರೆ.
ದಿನೇಶ್ ಕಾರ್ತಿಕ್: ಕಾರ್ತಿಕ್ ಪ್ರಸ್ತುತ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಡಿಕೆ, ಕಮೆಂಟೇಟರ್ ಆಗಿ ಕೂಡ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಅಜಿತ್ ಅಗರ್ಕರ್: ಅಂದಿನ ಟಿ20 ತಂಡದ ಅತ್ಯಂತ ಅನುಭವಿ ಬೌಲರ್ ಆಗಿ ಅಗರ್ಕರ್ ಕಾಣಿಸಿಕೊಂಡಿದ್ದರು. ಇದೀಗ ಅಗರ್ಕರ್ ಸ್ಟಾರ್ ಸ್ಪೋರ್ಟ್ಸ್ ಕಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇರ್ಫಾನ್ ಪಠಾಣ್: ಅಂದು ತಂಡದಲ್ಲಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಅವರು, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಆಡುತ್ತಿದ್ದಾರೆ. ಅಲ್ಲದೆ ಅದರ ಜೊತೆ ಕಾಮೆಂಟರಿಯಲ್ಲಿ ನಿರತರಾಗಿದ್ದಾರೆ.
ರುದ್ರ ಪ್ರತಾಪ್ ಸಿಂಗ್: ಆರ್ಪಿ ಸಿಂಗ್ ಕೂಡ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2018 ರಲ್ಲಿ ನಿವೃತ್ತರಾಗಿದ್ದ ಆರ್ಪಿ ಸಿಂಗ್ ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲು ಇಚ್ಛಿಸಿದ್ದಾರೆ.
ಪಿಯೂಷ್ ಚಾವ್ಲಾ: ಪಿಯೂಷ್ ಚಾವ್ಲಾ ಕೂಡ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಈಗಲೂ ಕ್ರಿಕೆಟ್ ಮುಂದುವರೆಸಿರುವ ಚಾವ್ಲಾ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
ಹರ್ಭಜನ್ ಸಿಂಗ್: ಅಂದಿನ ತಂಡದ ಅನುಭವಿ ಸ್ಪಿನ್ನರ್ ಎಂದರೆ ಅದು ಹರ್ಭಜನ್ ಸಿಂಗ್. ಈ ಬಾರಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ಭಜ್ಜಿ, ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿಲ್ಲ ಎಂಬುದು ವಿಶೇಷ.
ಜೋಗಿಂದರ್ ಶರ್ಮಾ: ಟಿ20 ವಿಶ್ವಕಪ್ನ ಲಾಸ್ಟ್ ಓವರ್ ಹೀರೋ ಎನಿಸಿಕೊಂಡಿದ್ದ ಜೋಗಿಂದರ್ ಶರ್ಮಾ ಸದ್ಯ ಹರ್ಯಾಣದಲ್ಲಿ ಡಿಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಶಾಂತ್: ಟೀಮ್ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ ಕೊನೆಯ ಕ್ಯಾಚ್ ಅಂದರೆ ನೆನಪಾಗುವುದು ಶ್ರೀಶಾಂತ್. ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಕ್ರಿಕೆಟ್ನಿಂದ ದೂರವೇ ಉಳಿದಿದ್ದ ಶ್ರೀಶಾಂತ್, ಇದೀಗ ಕೇರಳ ತಂಡಕ್ಕೆ ಮರಳಿದ್ದಾರೆ.