ಟೀಮ್ ಇಂಡಿಯಾ ಆಟಗಾರರ ಹೆಸರಿನೊಂದಿಗೆ ನ್ಯೂಜಿಲೆಂಡ್ ಪರ ಆಡುತ್ತಿರುವ ಯುವ ಕ್ರಿಕೆಟಿಗ
TV9 Web | Updated By: ಝಾಹಿರ್ ಯೂಸುಫ್
Updated on:
Nov 18, 2021 | 3:54 PM
Rachin Ravindra: 1990ರಲ್ಲಿ ನ್ಯೂಜಿಲ್ಯಾಂಡ್ಗೆ ತೆರಳಿದ್ದ ರವಿ ಕೃಷ್ಣಮೂರ್ತಿ ಅವರು ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಿದ್ದರು. ಇದೀಗ ಈ ಕ್ಲಬ್ನಲ್ಲಿ ರಚಿನ್ ರವೀಂದ್ರ ಕೂಡ ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕ್ಲಬ್ ಪ್ರತಿ ವರ್ಷ ಭಾರತದಲ್ಲಿ ಕ್ರಿಕೆಟ್ ಆಡುತ್ತಿರುವುದು ವಿಶೇಷ.
1 / 5
ಬುಧವಾರ ಜೈಪುರದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಕನ್ನಡಿಗ ಕೂಡ ಆಡಿದ್ದು ವಿಶೇಷ. ಬೆಂಗಳೂರಿನ ರಚಿನ್ ರವೀಂದ್ರ ಇದೀಗ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನ್ಯೂಜಿಲೆಂಡ್ನಲ್ಲಿ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ ಮಗ ಈ ಯುವ ಆಟಗಾರ.
2 / 5
ಬೆಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್ ಆಡಿದ್ದ ರವೀಂದ್ರ ಕೃಷ್ಣಮೂರ್ತಿ ಅವರ ಕನಸನ್ನು ಇದೀಗ ಮಗ ಈಡೇರಿಸುತ್ತಿರುವುದು ವಿಶೇಷ. ಅದರಲ್ಲೂ ರಚಿನ್ ಅವರ ತಂದೆ ಟೀಮ್ ಇಂಡಿಯಾದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಕ್ರಿಕೆಟಿಗ ಜೆ ಅರುಣ್ ಕುಮಾರ್ ಅವರ ಒಡನಾಡಿ. ಹೀಗಾಗಿಯೇ ಬಾಲ್ಯದಿಂದಲೇ ರಚಿನ್ ಜಾವಗಲ್ ಶ್ರೀನಾಥ್ ಅವರ ಕ್ರಿಕೆಟ್ ಸಲಹೆಗಳನ್ನು ಪಡೆದು ಉತ್ತಮ ಆಟಗಾರನಾಗಿ ಮಿಂಚುತ್ತಿದ್ದಾರೆ.
3 / 5
1990ರಲ್ಲಿ ನ್ಯೂಜಿಲ್ಯಾಂಡ್ಗೆ ತೆರಳಿದ್ದ ರವಿ ಕೃಷ್ಣಮೂರ್ತಿ ಅವರು ಅಲ್ಲಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಿದ್ದರು. ಇದೀಗ ಈ ಕ್ಲಬ್ನಲ್ಲಿ ರಚಿನ್ ರವೀಂದ್ರ ಕೂಡ ಆಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕ್ಲಬ್ ಪ್ರತಿ ವರ್ಷ ಭಾರತದಲ್ಲಿ ಕ್ರಿಕೆಟ್ ಆಡುತ್ತಿರುವುದು ವಿಶೇಷ. ರಚಿನ್ ರವೀಂದ್ರ ಕಳೆದ ನಾಲ್ಕು ವರ್ಷಗಳಿಂದ ಆಂಧ್ರದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಹಟ್ ಹಾಕ್ಸ್ ತಂಡದ ಭಾಗವಾಗಿದ್ದರು. ಅವರೊಬ್ಬ ಭರವಸೆಯ ಕ್ರಿಕೆಟಿಗ. ಯುವ ಕ್ರಿಕೆಟಿಗನಾಗಿ, ಅವರು ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಆಗಿ ಮಿಂಚುವ ಭರವಸೆ ಇದೆ ಎಂದಿದ್ದಾರೆ ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್‌ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್.
4 / 5
ಇಲ್ಲಿ ಮತ್ತೊಂದು ವಿಶೇಷ ಎಂದರೆ ರಚಿನ್ ಹೆಸರಿನ ಹಿಂದಿರುವ ಸಿಕ್ರೇಟ್. ಹೌದು, ರವಿ ಕೃಷ್ಣಮೂರ್ತಿ ಮಗನಿಗೆ ರಚಿನ್ ಎಂದು ಹೆಸರಿಡಲು ಟೀಮ್ ಇಂಡಿಯಾದ ಇಬ್ಬರು ಆಟಗಾರರು ಕಾರಣ. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಕೃಷ್ಣಮೂರ್ತಿಯವರು ತಮ್ಮ ಮಗನಿಗೆ ಈ ರಾಹುಲ್ ದ್ರಾವಿಡ್ ಹೆಸರಿನ "ರ" (RA) ಹಾಗೂ ಸಚಿನ್ ಹೆಸರಿನ "ಚಿನ್" (CHIN) ಸೇರಿಸಿ ರಚಿನ್ ಎಂದು ಹೆಸರಿಟಿದ್ದಾರೆ. ಇದೀಗ ಅದೇ ಹುಡುಗ ಟೀಮ್ ಇಂಡಿಯಾ ವಿರುದ್ದವೇ ಆಡುತ್ತಿರುವುದು ವಿಶೇಷ.
5 / 5
ಕಳೆದ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ರಚಿನ್ಗೆ ಚೊಚ್ಚಲ ಬಾರಿ ನ್ಯೂಜಿಲೆಂಡ್ ಹಿರಿಯರ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೇಳೆ ಕಿವೀಸ್ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನ್ಯೂಜಿಲೆಂಡ್ ಪರ 6 ಟಿ20 ಪಂದ್ಯಗಳನ್ನಾಡಿದ್ದಾರೆ. ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ 22 ವರ್ಷದ ರಚಿನ್ ಇದುವರೆಗೆ 6 ವಿಕೆಟ್ ಉರುಳಿಸಿದ್ದಾರೆ. ಅಷ್ಟೇ ಅಲ್ಲದೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 54 ರನ್ ಬಾರಿಸಿದ್ದಾರೆ.