
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಅನುಭವಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಸದ್ಯ ಸುದ್ದಿಯಲ್ಲಿದ್ದಾರೆ. ತಮ್ಮ ಎರಡನೇ ಪತ್ನಿ ಸಾನಿಯಾ ಮಿರ್ಜಾರೊಂದಿಗಿನ ವಿಚ್ಛೇದನದ ವದಂತಿಗಳ ನಡುವೆ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮಲಿಕ್ ವಿವಾಹವಾಗಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ಬಹಳ ಹಿಂದೆಯೇ ಸಂಬಂಧ ಹದಗೆಟ್ಟಿತ್ತು. ಕೆಲವು ದಿನಗಳ ಹಿಂದೆ, ಸಾನಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿಗೂಢ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಇದರಿಂದಾಗಿ ಮಲಿಕ್ ಮತ್ತು ಸಾನಿಯಾರ ವಿಚ್ಛೇದನದ ಸುದ್ದಿಗೆ ಪುಷ್ಠಿ ಸಿಕ್ಕಿತ್ತು.

ಆದಾಗ್ಯೂ, ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಏತನ್ಮಧ್ಯೆ, ಶೋಯೆಬ್ ಮಲಿಕ್ ವಿವಾಹವಾದ ಸನಾ ಜಾವೇದ್ ಯಾರು ಎಂಬುದನ್ನು ತಿಳಿದುಕೊಳ್ಳಲು ಅಂತರ್ಜಾಲದಲ್ಲಿ ಹುಡುಕಾಟ ಶುರುವಾಗಿದೆ.

ಸನಾ ಜಾವೇದ್ ಪ್ರಸಿದ್ಧ ಪಾಕಿಸ್ತಾನಿ ನಟಿಯಾಗಿದ್ದು, ಅವರು ಮಾರ್ಚ್ 25, 1993 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. ಸನಾ ಜಾವೇದ್ 2020 ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹ ಆಗಿದ್ದರು. ಆದಾಗ್ಯೂ, ಶೀಘ್ರದಲ್ಲೇ ಇಬ್ಬರೂ ಪರಸ್ಪರ ಬೇರ್ಪಟ್ಟಿದ್ದರು.

ಪಾಕಿಸ್ತಾನಿ ನಟಿ ಸನಾ ಜಾವೇದ್ 2012 ರಲ್ಲಿ ಶೆಹರ್-ಎ-ಜಾತ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ 'ಖಾನಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಅವರು ಬೆಳಕಿಗೆ ಬಂದರು.

ಇದರಲ್ಲಿ ಅಮೋಘ ನಟನೆಯಿಂದಾಗಿ ಸನಾ ಲಕ್ಸ್ ಸ್ಟೈಲ್ ಪ್ರಶಸ್ತಿಗಳಿಗೆ ನಾಮನಿರ್ದೇಶನ ಸಹ ಆಗಿದ್ದರು. ಅಲ್ಲದೆ ಸಾಮಾಜಿಕ ಆಧಾರಿತ ನಾಟಕ ರುಸ್ವಾಯಿ ಔರ್ ದ್ಯಾಂಕ್ನಲ್ಲಿನ ನಟನೆಗಾಗಿ ಸನಾ ಸಾಕಷ್ಟು ಪ್ರಶಂಸೆಗಳನ್ನು ಪಡೆದಿದ್ದರು.

ಅಲ್ಲದೆ ಅವರಿಗೆ ಅತ್ಯುತ್ತಮ ನಟಿ ವಿಮರ್ಶಕರ ವಿಭಾಗದಲ್ಲಿ PISA ಪ್ರಶಸ್ತಿ ಕೂಡ ಸಿಕ್ಕಿದೆ. ಅವರು ಬೇಹದ್, ಶಾರಿಕ್-ಎ-ಹಯಾತ್, ಡಿನೋ ಕಿ ದುಲ್ಹನಿಯಾ ಮತ್ತು ಐ ಲವ್ ಯೂ ಜಾಡಾದಂತಹ ಜನಪ್ರಿಯ ಟೆಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.