ಟೀಮ್ ಇಂಡಿಯಾಗೆ ಆಯ್ಕೆಯಾದ ತನುಷ್ ಕೋಟ್ಯಾನ್ ಯಾರು ಗೊತ್ತೇ?
Tanush Kotian: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತನುಷ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬೈ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯುವ ಸ್ಪಿನ್ ಆಲ್ರೌಂಡರ್ ಯಶಸ್ವಿಯಾಗಿದ್ದಾರೆ.
1 / 7
ಹೆಸರು ತನುಷ್ ಕೋಟ್ಯಾನ್. ವಯಸ್ಸು ಕೇವಲ 26. ಬಲಗೈ ಸ್ಪಿನ್ನರ್, ಬಲಗೈ ಬ್ಯಾಟರ್. ಕಳೆದ ಕೆಲ ವರ್ಷಗಳಿಂದ ಮುಂಬೈ ತಂಡದ ಖಾಯಂ ಸದಸ್ಯ. ಇದೀಗ ರವಿಚಂದ್ರನ್ ಅಶ್ವಿನ್ ಅವರಿಂದ ತೆರವಾಗಿರುವ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಯಾರು ಈ ಕೋಟ್ಯಾನ್ ಎಂಬ ಗೂಗಲ್ ಹುಡುಕಾಟ ಶುರುವಾಗಿದೆ.
2 / 7
ತನುಷ್ ಕೋಟ್ಯಾನ್ ಕುಟುಂಬಸ್ಥರು ಕರ್ನಾಟಕ ಮೂಲದವರಾಗಿದ್ದರೂ, ಅವರು ಬೆಳೆದಿದ್ದು ಮುಂಬೈನಲ್ಲಿ. ಹೀಗಾಗಿಯೇ ಮುಂಬೈನಲ್ಲೇ ಕ್ರಿಕೆಟ್ ಕೆರಿಯರ್ ಕೂಡ ಶುರುವಾಯಿತು. ಬಾಲ್ಯದಿಂದಲೇ ಆಲ್ ರೌಂಡರ್ ಆಟದೊಂದಿಗೆ ಗಮನ ಸೆಳೆದ ತನುಷ್ಗೆ ಮುಂಬೈ ಕಿರಿಯರ ತಂಡದಲ್ಲಿ ಸ್ಥಾನ ಸಿಗಲು ಹೆಚ್ಚೇನು ಸಮಯವಾಗಲಿಲ್ಲ.
3 / 7
2018 ರಲ್ಲಿ, ಅಂದರೆ ತಮ್ಮ 20ನೇ ವಯಸ್ಸಿನಲ್ಲಿ ಮುಂಬೈ ಪರ ಕಣಕ್ಕಿಳಿದ ತನುಷ್ ಆ ಬಳಿಕ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಏಕೆಂದರೆ ಯುವ ಆಲ್ ರೌಂಡರ್ ತನ್ನ ಆಲ್ ರೌಂಡರ್ ಆಟದೊಂದಿಗೆ ತಂಡದಲ್ಲಿ ಖಾಯಂ ಸ್ಥಾನ ಕರಸ್ಥ ಮಾಡಿಕೊಂಡಿದ್ದರು. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯಲ್ಲೂ ಮುಂಬೈ ತಂಡದ ಭಾಗವಾಗಿದ್ದಾರೆ.
4 / 7
ತನುಷ್ ಕೋಟ್ಯಾನ್ ಮುಂಬೈ ಪರ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಅವರು 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಹಾಗೆಯೇ 25.70 ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಇದೇ ವೇಳೆ ಅವರ ಬ್ಯಾಟ್ನಿಂದ 2 ಭರ್ಜರಿ ಶತಕ ಮತ್ತು 13 ಅರ್ಧ ಶತಕಗಳು ಮೂಡಿಬಂದಿವೆ.
5 / 7
ಇನ್ನು 2023-24ರಲ್ಲಿ ಮುಂಬೈ ತಂಡವು ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್ ಪ್ರಮುಖ ಪಾತ್ರವಹಿಸಿದ್ದರು. ಈ ಟೂರ್ನಿಯಲ್ಲಿ 41.83 ಸರಾಸರಿಯಲ್ಲಿ 502 ರನ್ ಗಳಿಸಿದ್ದಲ್ಲದೇ, 29 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
6 / 7
ಇದಾದ ಬಳಿಕ ನಡೆದ ಇರಾನಿ ಕಪ್ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 27 ವರ್ಷಗಳ ನಂತರ ಮುಂಬೈ ತಂಡವು ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ತನುಷ್ 3 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು.
7 / 7
ಈ ಎಲ್ಲಾ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರ ಸ್ಥಾನದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಂತೆ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತನುಷ್ ಕೋಟ್ಯಾನ್ ಭಾರತ ತಂಡದ ಭಾಗವಾಗಲಿದ್ದಾರೆ.