- Kannada News Photo gallery Cricket photos Boxing Day Test: A crucial match for three teams due To WTC Final
ಬಾಕ್ಸಿಂಗ್ ಡೇ ಟೆಸ್ಟ್: ಮೂರು ತಂಡಗಳಿಗೆ ನಿರ್ಣಾಯಕ ಪಂದ್ಯ
WTC Final 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂನ್ 11 ರಿಂದ ಶುರುವಾಗಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡಗಳು ಕಣಕ್ಕಿಳಿಯಲಿದೆ ಎಂಬುದೇ ಈಗ ಕುತೂಹಲ. ಏಕೆಂದರೆ ಫೈನಲ್ ರೇಸ್ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳಿದ್ದು, ಈ ಮೂರು ತಂಡಗಳಲ್ಲಿ ಎರಡು ಟೀಮ್ ಫೈನಲ್ ಆಡುವುದು ಬಹುತೇಕ ಖಚಿತ.
Updated on: Dec 24, 2024 | 8:30 AM

ಡಿಸೆಂಬರ್ 26... ಕ್ರಿಸ್ಮಸ್ ಹಬ್ಬದ ಮರುದಿನ ನಾಲ್ಕು ತಂಡಗಳು ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ 4 ತಂಡಗಳಲ್ಲಿ ಮೂರು ತಂಡಗಳಿಗೆ ಈ ಪಂದ್ಯವು ನಿರ್ಣಾಯಕ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ಭಾರತ, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ನೇರ ಪೈಪೋಟಿ ಇದೆ. ಈ ಪೈಪೋಟಿಯಲ್ಲಿ ಮುಂದುವರೆಯಬೇಕಿದ್ದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು.

ಇಲ್ಲಿ ಡಿಸೆಂಬರ್ 26 ರಂದು ಸೆಂಚುರಿಯನ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಜಯಗಳಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಆಡುವುದು ಖಚಿತವಾಗಲಿದೆ.

ಮತ್ತೊಂದೆಡೆ ಡಿಸೆಂಬರ್ 26 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯ ಶುರುವಾಗಲಿದೆ. ಈ ಮ್ಯಾಚ್ನಲ್ಲಿ ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಯನ್ನು ಸುಗಮಗೊಳಿಸಬಹುದು. ಅತ್ತ ಆಸ್ಟ್ರೇಲಿಯಾ ತಂಡ ಫೈನಲ್ ರೇಸ್ನಲ್ಲಿ ಉಳಿದುಕೊಳ್ಳಲು ಭಾರತದ ವಿರುದ್ಧ ಗೆಲ್ಲಬೇಕು.

ಏಕೆಂದರೆ ಟೀಮ್ ಇಂಡಿಯಾ ಮೆಲ್ಬೋರ್ನ್ ಹಾಗೂ ಸಿಡ್ನಿ ಟೆಸ್ಟ್ಗಳಲ್ಲಿ ಜಯ ಸಾಧಿಸಿದರೆ ಫೈನಲ್ ಆಡುವುದು ಬಹುತೇಕ ಖಚಿತವಾಗಲಿದೆ. ಏಕೆಂದರೆ ಆ ಬಳಿಕ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಸರಣಿ ಗೆದ್ದರೂ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾವನ್ನು ಹಿಂದಿಕ್ಕಲಾಗುವುದಿಲ್ಲ. ಹೀಗಾಗಿ ಆಸೀಸ್ ಪಾಲಿಗೂ ಬಾಕ್ಸಿಂಗ್ ಡೇ ಟೆಸ್ಟ್ ನಿರ್ಣಾಯಕ.

ಅದರಂತೆ ಈ ಬಾರಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಮೂರು ತಂಡಗಳ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಭವಿಷ್ಯವನ್ನು ನಿರ್ಧರಿಸಲಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಡಿಸೆಂಬರ್ 26 ರಿಂದ ಸೆಂಚುರಿಯನ್ನಲ್ಲಿ ಸೌತ್ ಆಫ್ರಿಕಾ vs ಪಾಕಿಸ್ತಾನ್ ನಡುವೆ, ಮೆಲ್ಬೋರ್ನ್ನಲ್ಲಿ ಭಾರತ vs ಆಸ್ಟ್ರೇಲಿಯಾ ನಡುವೆ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.



















