
ಟಿ20 ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಒಟ್ಟು 15 ಸದಸ್ಯರು ಸ್ಥಾನ ಪಡೆದಿದ್ದಾರೆ. ಈ ಬಳಗವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಎಂದರೆ ಈ ಬಾರಿ ಏಷ್ಯಾಕಪ್ನಲ್ಲಿ ಅವಕಾಶ ಪಡೆದ ಬಹುತೇಕ ಆಟಗಾರರೇ ಟಿ20 ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಲ ಯುವ ಆಟಗಾರರು ಈ ಬಾರಿ ಕೂಡ ಅವಕಾಶ ವಂಚಿತರಾಗಿದ್ದಾರೆ. ಹಾಗಿದ್ರೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯದ ಸ್ಟಾರ್ ಆಟಗಾರರು ಯಾರೆಲ್ಲಾ...

ರವೀಂದ್ರ ಜಡೇಜಾ: ಟೀಮ್ ಇಂಡಿಯಾದ ಆಲ್ರೌಂಡರ್ ಜಡೇಜಾ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಸರ್ಜರಿಗೆ ಒಳಗಾಗಿರುವ ಅವರನ್ನು ತಂಡದ ಆಯ್ಕೆಗೆ ಪರಿಗಣಿಸಲಾಗಿಲ್ಲ.

ಸಂಜು ಸ್ಯಾಮ್ಸನ್: ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನದ ನಿರೀಕ್ಷಿಯಲ್ಲಿದ್ದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಈ ಬಾರಿ ಕೂಡ ಅವಕಾಶ ವಂಚಿತರಾಗಿದ್ದಾರೆ.

ಇಶಾನ್ ಕಿಶನ್: ಕಳೆದ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಸ್ಪೋಟಕ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರನ್ನು ಸಹ ಈ ಸಲ ಆಯ್ಕೆಗೆ ಪರಿಗಣಿಸಲಾಗಿಲ್ಲ.

ಶಾರ್ದೂಲ್ ಠಾಕೂರ್: ಟೀಮ್ ಇಂಡಿಯಾದ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ಗೂ ಈ ಬಾರಿ ಮಣೆ ಹಾಕಿಲ್ಲ. ವಿಶೇಷ ಎಂದರೆ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಶಾರ್ದೂಲ್ ತಂಡದಲ್ಲಿದ್ದರು.

ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಈ ಬಾರಿ ತಂಡಕ್ಕೆ ಆಯ್ಕೆಯಾಗಿಲ್ಲ. ಇದಾಗ್ಯೂ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ.

ಶ್ರೇಯಸ್ ಅಯ್ಯರ್: ಮಧ್ಯಮ ಕ್ರಮಾಂಕದ ಬಲಗೈ ದಾಂಡಿಗ ಶ್ರೇಯಸ್ ಅಯ್ಯರ್ಗೂ ಈ ಸಲ ಚಾನ್ಸ್ ಸಿಕ್ಕಿಲ್ಲ. ಏಷ್ಯಾಕಪ್ಗೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಅಯ್ಯರ್ ಟಿ20 ವಿಶ್ವಕಪ್ನಲ್ಲೂ ಸ್ಟಾಂಡ್ಬೈ ಆಟಗಾರನಾಗಿಯೇ ಉಳಿದಿದ್ದಾರೆ.

ದೀಪಕ್ ಚಹರ್: ಏಷ್ಯಾಕಪ್ನಲ್ಲಿ ಅವೇಶ್ ಖಾನ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದ ಚಹರ್ ಈ ಸಲ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದರು. ಆದರೆ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿಯೇ ಇರಿಸಲಾಗಿದೆ.

ರವಿ ಬಿಷ್ಣೋಯ್: ಏಷ್ಯಾಕಪ್ ತಂಡದಲ್ಲಿದ್ದ ರವಿ ಬಿಷ್ಣೋಯ್ ಪಾಕಿಸ್ತಾನ್ ವಿರುದ್ಧ ಏಕೈಕ ಪಂದ್ಯವಾಡಿದ್ದರು. ಅಲ್ಲದೆ ಮಹತ್ವದ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 26 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆದರೆ ಇದೀಗ ಬಿಷ್ಣೋಯ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲಾಗಿದ್ದು, ಬದಲಿಗೆ ಮೀಸಲು ಆಟಗಾರರ ಪಟ್ಟಿಗೆ ಆಯ್ಕೆ ಮಾಡಲಾಗಿದೆ.

ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.