
ಏಷ್ಯಾಕಪ್ ಟಿ20 ಟೂರ್ನಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರ ಈ ತಂಡದಲ್ಲಿ ಮಾಜಿ ನಾಯಕರುಗಳಾದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಅಂದರೆ ತಂಡದ ಸ್ಟಾರ್ ಆಟಗಾರರನ್ನೇ ಕೈ ಬಿಟ್ಟು ಯುವ ಪಡೆಯನ್ನು ಒಳಗೊಂಡ ಬಳಗವನ್ನು ಪಿಸಿಬಿ ಘೋಷಿಸಿದೆ.

ಇದರ ಬೆನ್ನಲ್ಲೇ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಅವರನ್ನು ಕೈ ಬಿಡಲು ಕಾರಣವೇನು? ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ಕೇಳಿ ಬಂದ ಮೊದಲ ಉತ್ತರ ಸ್ಟ್ರೈಕ್ ರೇಟ್. ಆದರೆ ಅದು ಅವರ ಟಿ20 ವೃತ್ತಿಜೀವನದ ಸ್ಟ್ರೈಕ್ ರೇಟ್ ಅನ್ನು ಪರಿಗಣಿಸಿ ಅಲ್ಲ ಎಂಬುದು ವಿಶೇಷ. ಬದಲಾಗಿ ಟೂರ್ನಮೆಂಟ್ಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಇಬ್ಬರನ್ನು ಕೈ ಬಿಡಲಾಗಿದೆ.

ಬಾಬರ್ ಆಝಂ ಬಹು ತಂಡಗಳನ್ನು ಒಳಗೊಂಡ ಟೂರ್ನಿಗಳಲ್ಲಿ ಈವರೆಗೆ 22 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 612 ರನ್ಗಳು. ಅಂದರೆ ಮಲ್ಟಿ ಟೀಮ್ಸ್ ಟೂರ್ನಿಗಳಲ್ಲಿ ಬಾಬರ್ ಅವರ ಅವರೇಜ್ ಕೇವಲ 30 ರನ್ಗಳು ಮಾತ್ರ. ಇನ್ನು ಸ್ಟ್ರೈಕ್ ರೇಟ್ ಇರುವುದು 111.3 ಮಾತ್ರ ಎಂದರೆ ನಂಬಲೇಬೇಕು. ಅಂದರೆ ಪ್ರಮುಖ ಟೂರ್ನಿಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಎಂಬುದು ಸ್ಪಷ್ಟ.

ಇನ್ನು ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರ ಕಥೆ ಕೂಡ ಭಿನ್ನವಾಗಿಲ್ಲ. ಬಹು ತಂಡಗಳನ್ನು ಒಳಗೊಂಡ ಟೂರ್ನಿಯಲ್ಲಿ ರಿಝ್ವಾನ್ ಕೂಡ 22 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 44ರ ಸರಾಸರಿಯಲ್ಲಿ ಒಟ್ಟು 792 ರನ್ ಕಲೆಹಾಕಿದ್ದಾರೆ. ಅದು ಸಹ 114.6ರ ಸ್ಟ್ರೈಕ್ ರೇಟ್ನಲ್ಲಿ ಎಂಬುದೇ ಅಚ್ಚರಿ.

ಅಂದರೆ ಇಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಬಹು ತಂಡಗಳ ಟೂರ್ನಮೆಂಟ್ನಲ್ಲಿ 115 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಬಾಬರ್ ಹಾಗೂ ರಿಝ್ವಾನ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿಲ್ಲ. ಇತ್ತ ಏಷ್ಯಾಕಪ್ಗೆ ಆಯ್ಕೆಯಾದ ಪಾಕಿಸ್ತಾನ್ ತಂಡ ಈ ಕೆಳಗಿನಂತಿದೆ...

ಏಷ್ಯಾಕಪ್ಗೆ ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.