ಭಾರತ ಮತ್ತು ಇಂಗ್ಲೆಂಡ್ ನಡುವೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದರು. ಅತ್ತ ಇಂಗ್ಲೆಂಡ್ ಆಟಗಾರರು ಕೂಡ ಇದೇ ವಿನ್ಯಾಸದ ಕ್ಯಾಪ್ ಧರಿಸಿದ್ದರು. ಇದಾಗ್ಯೂ 2ನೇ ದಿನದಾಟದ ವೇಳೆ ಉಭಯ ತಂಡಗಳು ಟೆಸ್ಟ್ ಕ್ಯಾಪ್ ಬದಲಿಸಿದ್ದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಇಂಗ್ಲೆಂಡ್ ಮಾಜಿ ವೇಗಿ ಬಾಬ್ ವಿಲ್ಲಿಸ್ ಸ್ಮರಣಾರ್ಥವಾಗಿ ಉಭಯ ತಂಡಗಳ ಆಟಗಾರರು ನೀಲಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿದ್ದರು. ಅಷ್ಟೇ ಅಲ್ಲದೆ 45 ಸೆಕೆಂಡುಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಇಂಗ್ಲೆಂಡ್ ಲೆಜೆಂಡ್ ಆಟಗಾರನನ್ನು ಸ್ಮರಿಸಲಾಯಿತು. ಈ ವೇಳೆ ಆಟಗಾರರು ಧರಿಸಿದ್ದ ಕ್ಯಾಪ್ಗಳನ್ನು ಮುಂದೆ ಹರಾಜಿಗಿಡಲಾಗುತ್ತದೆ. ಅದು ಕೂಡ ಸದುದ್ದೇಶಕ್ಕೆ ಎಂಬುದು ವಿಶೇಷ.
ಬಾಬ್ ವಿಲ್ಲಿಸ್ ತಮ್ಮ 70ನೇ ವಯಸ್ಸಿನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ನಿಂದಾಗಿ ನಿಧನರಾಗಿದ್ದರು. ಅಂದಿನಿಂದ, ಈ ರೋಗದ ಚಿಕಿತ್ಸೆ, ಪರೀಕ್ಷೆ ಮತ್ತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಬಾಬ್ ವಿಲ್ಲಿಸ್ ಫಂಡ್ ಅನ್ನು ರಚಿಸಲಾಗಿದೆ. ಅಲ್ಲದೆ ಈ ರೋಗದ ಚಿಕಿತ್ಸೆ ಮತ್ತು ಸಂಶೋಧನೆಗಾಗಿ ಇಂಗ್ಲೆಂಡ್‌ನಲ್ಲಿ #BlueForBob ಅಭಿಯಾನ ನಡೆಯುತ್ತಿದೆ.
ಇಂಗ್ಲೆಂಡ್‌ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿ 8 ಪುರುಷರಲ್ಲಿ ಒಬ್ಬರಿಗೆ ಪರಿಣಾಮ ಬೀರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಹತ್ವದ ಜನಜಾಗೃತಿ ಕಾರ್ಯಕ್ರಮವಾಗಲಿ, ಈ ರೋಗದ ಬಗ್ಗೆ ಸಂಶೋಧನೆಗಳಾಗಲಿ ನಡೆದಿಲ್ಲ. ಇದೀಗ ಈ ಕ್ಯಾನ್ಸರ್ ರೋಗದ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಬಾಬ್ ವಿಲ್ಲಿಸ್ ಫಂಡ್ ಸಂಸ್ಥೆಯು ಶ್ರಮಿಸುತ್ತಿದೆ.
ಅದರಂತೆ ವಿಲ್ಲೀಸ್ ಅವರ ಪತ್ನಿ ಲಾರೆನ್ ಕ್ಲಾರ್ಕ್ ಮತ್ತು ಅವರ ಸಹೋದರ ಡೇವಿಡ್ ಅವರು ಬಾಬ್ ವಿಲ್ಲಿಸ್ ಹೆಸರಿನಲ್ಲಿ ಬಾಬ್ ವಿಲ್ಲಿಸ್ ಫಂಡ್ ಪ್ರಾರಂಭಿಸಿದ್ದಾರೆ. ಈ ಮೂಲಕ ನಾನಾ ಕಾರ್ಯಕ್ರಮಗಳ ಮೂಲಕ ಈ ರೋಗಕ್ಕೆ ಔಷಧದ ಸಂಶೋಧನೆಗಾಗಿ ಫಂಡ್ ಸಂಗ್ರಹಿಸಲಾಗುತ್ತಿದೆ.
ಇನ್ನು ಬಾಬ್ ವಿಲ್ಲಿಸ್ ಕ್ರಿಕೆಟಿಗರಾಗಿರುವ ಕಾರಣ ಅವರ ಗೌರವಾರ್ಥವಾಗಿ ಈ ಫಂಡ್ಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಕೈ ಜೋಡಿಸಿದೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ನಡೆಯುವ ಪ್ರತಿ ವರ್ಷದ ಯಾವುದಾದರು ಸರಣಿಯಲ್ಲಿ ಆಟಗಾರರು #BlueForBob ಅಭಿಯಾನದ ಬ್ಲೂ ಕ್ಯಾಪ್ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಟೀಮ್ ಇಂಡಿಯಾ ಆಟಗಾರರು ಹಾಗೂ ಇಂಗ್ಲೆಂಡ್ ಕ್ರಿಕೆಟಿಗರು ಈ ಅಭಿಯಾನದ ಭಾಗವಾಗಿ ಬ್ಲೂ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದರು. ಆಟಗಾರರು ಧರಿಸಿದ ಈ ಕ್ಯಾಪ್ ಅನ್ನು ಹರಾಜಿಗಿಡುವ ಮೂಲಕ ಫಂಡ್ ಸಂಗ್ರಹಿಸಲಾಗುತ್ತದೆ.