Updated on: Mar 21, 2023 | 8:30 PM
ಫೆಬ್ರವರಿ 13 ರಂದು ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ್ತಿ ಸ್ಮೃತಿ ಮಂಧಾನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 3 ಕೋಟಿ 40 ಲಕ್ಷ ರೂ. ನೀಡಿ ಸ್ಮೃತಿಯನ್ನು ಖರೀದಿಸಿತ್ತು. ಅಷ್ಟೇ ಅಲ್ಲದೆ ಆರ್ಸಿಬಿ ತಂಡದ ನಾಯಕತ್ವವನ್ನೂ ಕೂಡ ನೀಡಿದ್ದರು.
ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ನ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಆಡಿರುವ 8 ಪಂದ್ಯಗಳಲ್ಲಿ ಆರ್ಸಿಬಿ 6 ರಲ್ಲಿ ಸೋಲನುಭವಿಸಿದೆ. ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ಅಭಿಯಾನ ಅಂತ್ಯಗೊಳಿಸಿದೆ.
ಇತ್ತ ಆರ್ಸಿಬಿ ಫ್ರಾಂಚೈಸಿಯು ಕೋಟಿ ನೀಡಿ ಖರೀದಿಸಿದ ಸ್ಮೃತಿ ಮಂಧಾನ ಬ್ಯಾಟಿಂಗ್ನಲ್ಲೂ ವಿಫಲರಾಗಿದ್ದರು. ಅತ್ತ ನಾಯಕತ್ವದಲ್ಲೂ ಹಿಂದೆ ಉಳಿದರು. ಇದಕ್ಕೆ ಸಾಕ್ಷಿಯೇ ಆರ್ಸಿಬಿ ತಂಡವು ಸತತವಾಗಿ 5 ಪಂದ್ಯಗಳನ್ನು ಸೋತಿರುವುದು.
ಇನ್ನು 8 ಪಂದ್ಯಗಳಲ್ಲಿ ಆರಂಭಿಕಳಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ ಕಲೆಹಾಕಿದ್ದು ಕೇವಲ 149 ರನ್ಗಳು ಮಾತ್ರ. ಅಂದರೆ ಪ್ರತಿ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ 18.62 ಅಷ್ಟೇ. ಹಾಗೆಯೇ ಇಡೀ ಟೂರ್ನಿಯಲ್ಲಿ ಒಂದೇ ಒಂದು ಅರ್ಧಶತಕ ಕೂಡ ಬಾರಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.
ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಸ್ಮೃತಿ ಮಂಧಾನ ಅವರ ರನ್ಗಳಿಕೆ ಹಾಗೂ ಹರಾಜು ಮೊತ್ತವನ್ನು ಲೆಕ್ಕಹಾಕಿದರೆ, ಅವರು ಪ್ರತಿ ರನ್ಗೆ 2,28,187 ರೂ.ಗಳನ್ನು ಪಡೆದಿದ್ದಾರೆ.
ಒಟ್ಟಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ಗಾಗಿ ಬಲಿಷ್ಠ ತಂಡವನ್ನು ರೂಪಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಕ್ಕಾಚಾರಗಳು ಮೊದಲ ಸೀಸನ್ನಲ್ಲೇ ತಲೆಕೆಳಗಾಗಿದೆ. ಇನ್ನು ಮುಂದಿನ ಸೀಸನ್ನಲ್ಲಿ ಏನೆಲ್ಲಾ ಬದಲಾವಣೆ ತರಲಿದ್ದಾರೆ ಕಾದು ನೋಡಬೇಕಿದೆ.