ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್ ಎಲ್ಲಿಸ್ ಪೆರ್ರಿ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ತಂಡವನ್ನು ಸಂಕಷ್ಟದಿಂದ ಹೊರತಂದಿದಲ್ಲದೆ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 56 ಎಸೆತಗಳನ್ನು ಎದುರಿಸದ ಪೆರ್ರಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಅಜೇಯ 90 ರನ್ ಬಾರಿಸಿದರು.
ಕೊನೆಯ ಓವರ್ನಲ್ಲಿ ಪೆರ್ರಿ ಶತಕ ಬಾರಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಎದುರಾಳಿ ತಂಡದ ಅನುಭವಿ ಬೌಲರ್ ಸೋಫಿ ಎಕ್ಲೆಸ್ಟೋನ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪೆರ್ರಿ ಕೇವಲ 10 ರನ್ಗಳಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಶತಕದಿಂದ ವಂಚಿತರಾದರು.
ಎಲ್ಲಿಸ್ ಪೆರ್ರಿ ಅವರ ಸ್ಫೋಟಕ 90 ರನ್ ಹಾಗೂ ಡ್ಯಾನಿ ವ್ಯಾಟ್-ಹಾಡ್ಜ್ ಅವರ 57 ರನ್‌ಗಳ ಕಾಣಿಕೆಯಿಂದ ಆರ್‌ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 180 ರನ್ಗಳನ್ನು ಕಲೆಹಾಕಿದೆ. ಪೆರ್ರಿ ಹೊರತಾಗಿ ಡ್ಯಾನಿ ವ್ಯಾಟ್ ಕೂಡ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 57 ರನ್ ಬಾರಿಸಿದರು.
ಈ ಇಬ್ಬರನ್ನು ಬ್ಯಾಟರ್ಗಳನ್ನು ಹೊರತುಪಡಿಸಿ ಆರ್‌ಸಿಬಿ ಪಾಳಯದಿಂದ ಮತ್ತ್ಯಾರು ಮಿಂಚಲಿಲ್ಲ. ನಾಯಕಿ ಸ್ಮೃತಿ ಮಂಧಾನ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೂಡ ಸತತ ಎರಡನೇ ಪಂದ್ಯದಲ್ಲೂ ವಿಫಲರಾಗಿ 8 ರನ್ಗಳಿಗೆ ಸುಸ್ತಾದರು. ಕನಿಕಾ ಅವರ ಇನ್ನಿಂಗ್ಸ್ ಕೂಡ 5 ರನ್ಗಳಿಗೆ ಅಂತ್ಯವಾಯಿತು.