
ಮಹಿಳಾ ಪ್ರೀಮಿಯರ್ ಲೀಗ್ನ ಮೂರನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಫೆಬ್ರವರಿ 14 ರಿಂದ ಈ ಟೂರ್ನಿ ಪ್ರಾರಂಭವಾಗಲಿದ್ದು, ಮಾರ್ಚ್ 11 ರಂದು ಕೊನೆಗೊಳ್ಳಲಿದೆ. ಮೊದಲ ಬಾರಿಗೆ ಈ ಲೀಗ್ ಅನ್ನು ನಾಲ್ಕು ನಗರಗಳಲ್ಲಿ ಆಯೋಜಿಸಲಾಗುತ್ತಿದ್ದು, ಬರೋಡಾ, ಬೆಂಗಳೂರು, ಮುಂಬೈ ಮತ್ತು ಲಕ್ನೋದಲ್ಲಿ ಪಂದ್ಯಗಳು ನಡೆಯಲಿವೆ.

ಈ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ತಲಾ 2 ಪಂದ್ಯಗಳನ್ನು ಆಡಲಿವೆ. ಈ ರೀತಿಯಾಗಿ ಒಂದು ತಂಡ ಒಟ್ಟು ಎಂಟು ಪಂದ್ಯಗಳನ್ನು ಆಡುತ್ತದೆ. ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಈ 22 ಪಂದ್ಯಗಳಲ್ಲಿ ಆರ್ಸಿಬಿ ಆಡಲಿರುವ 8 ಪಂದ್ಯಗಳನ್ನು ಯಾವ ದಿನದಂದು ಯಾವ ತಂಡದ ಎದುರು ಎಲ್ಲಿ ಆಡುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಆರ್ಸಿಬಿ ಹಾಲಿ ಚಾಂಪಿಯನ್ ಆಗಿರುವ ಕಾರಣ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯಲಿದೆ. ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು. ಹೀಗಾಗಿ ಇದೀಗ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ, ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರವರಿ 14 ರಂದು ವಡೋದರದಲ್ಲಿ ನಡೆಯಲಿದೆ.

ಆ ಬಳಿಕ ಫೆಬ್ರವರಿ 17 ರಂದು ತನ್ನ ಎರಡನೇ ಪಂದ್ಯವನ್ನಾಡಲಿರುವ ಸ್ಮೃತಿ ಮಂಧಾನ ಪಡೆ, ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ವಡೋದರದಲ್ಲಿ ಎದುರಿಸಲಿದೆ.

ಮೂರನೇ ಪಂದ್ಯವನ್ನು ಫೆಬ್ರವರಿ 21 ರಂದು ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಪಂದ್ಯದಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ತವರು ಮೈದಾನ ಬೆಂಗಳೂರಿನಲ್ಲಿ ಎದುರಿಸಲಿದೆ.

ಫೆಬ್ರವರಿ 24 ರಂದು ನಡೆಯಲ್ಲಿರುವ ನಾಲ್ಕನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ, ಹಾಲಿ ಚಾಂಪಿಯನ್ ಆರ್ಸಿಬಿಗೆ ಎದುರಾಳಿಯಾಗಲಿದೆ. ಈ ಪಂದ್ಯವೂ ಕೂಡ ಬೆಂಗಳೂರಿನಲ್ಲಿ ನಡೆಯಲ್ಲಿದೆ.

ಫೆಬ್ರವರಿ 27 ರಂದು ನಡೆಯಲ್ಲಿರುವ ಐದನೇ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಎರಡನೇ ಬಾರಿಗೆ ಗುಜರಾತ್ ಜೈಂಟ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ.

ಮಾರ್ಚ್ 1 ರಂದು ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಎರಡನೇ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಪಂದ್ಯವನ್ನಾಡಲಿದೆ.

ತವರಿನಲ್ಲಿ ಆಡಿದ ಬಳಿಕ ಲಕ್ನೋಗೆ ಪ್ರಯಾಣ ಬೆಳೆಸಲಿರುವ ಆರ್ಸಿಬಿ ತಂಡ ಮಾರ್ಚ್ 8 ರಂದು ಯುಪಿ ವಾರಿಯರ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ.

ಲೀಗ್ನಲ್ಲಿ ತನ್ನ ಕೊನೆಯ ಪಂದ್ಯವನ್ನು ಮಾರ್ಚ್ 11 ರಂದು ಆಡಲಿರುವ ಆರ್ಸಿಬಿ, ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸಲಿದೆ. ಈ ಪಂದ್ಯದ ಬಳಿಕ ಎಲಿಮಿನೇಟರ್ ಸುತ್ತು ಆರಂಭವಾಗಲಿದೆ.