
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 4ರ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಶುಭಾರಂಭ ಮಾಡಿದೆ. ಈ ಶುಭಾರಂಭದ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ಆಘಾತ ಎದುರಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಪೂಜಾ ವಸ್ತ್ರಾಕರ್ ಗಾಯಗೊಂಡಿದ್ದು, ಈ ಗಾಯದ ಕಾರಣ 2 ವಾರಗಳ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲಿದ್ದಾರೆ. ಅಂದರೆ ಆರ್ಸಿಬಿ ತಂಡದ ಮುಂದಿನ 5 ಪಂದ್ಯಗಳಿಗೆ ಪೂಜಾ ಅಲಭ್ಯರಾಗಲಿದ್ದಾರೆ.

ಪೂಜಾ ವಸ್ತ್ರಾಕರ್ ಆರ್ಸಿಬಿ ತಂಡದಲ್ಲಿರುವ ಪ್ರಮುಖ ವೇಗಿ. ಇದೀಗ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಕನಿಷ್ಠ ಎರಡು ವಾರಗಳ ಕಾಲ ಅವರು ಮೈದಾನದಿಂದ ಹೊರಗುಳಿಯಲಿದ್ದಾರೆ.

ಇತ್ತ ಮೊದಲ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ಅವರು ಹೊರಗುಳಿದಿದ್ದ ಕಾರಣ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಇಂಗ್ಲೆಂಡ್ ಬೌಲರ್ ಲಿನ್ಸೆ ಸ್ಮಿತ್ ಅವರನ್ನು ಕಣಕ್ಕಿಳಿಸಿತ್ತು. ಇದಾಗ್ಯೂ ಸ್ಮಿತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಪಂದ್ಯದಲ್ಲಿ 2 ಓವರ್ಗಳನ್ನು ಎಸೆದಿದ್ದ ಲೆನ್ಸಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಇದೀಗ ಪೂಜಾ ವಸ್ತ್ರಾಕರ್ ಅವರ ಅನುಪಸ್ಥಿತಿಯಲ್ಲಿ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್ಸಿಬಿ ಕಣಕ್ಕಿಳಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಗರೆ.