
ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಿರುವ ಟೀಂ ಇಂಡಿಯಾ 2ನೇ ಆವೃತ್ತಿಯಲ್ಲೂ ಸೋಲಿನ ಭೀತಿಯಲ್ಲಿದೆ. ಆಸೀಸ್ ನೀಡಿರುವ 469 ರನ್ಗಳ ಗುರಿ ಬೆನ್ನಟ್ಟಿರುವ ಭಾರತ 50 ರನ್ ಪೂರೈಸುವುದರೊಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ.

ಭಾರತದ ಪರ ಮೊದಲ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್ನಲ್ಲಿ ಅತ್ಯಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಗಿಲ್, ಈ ಫೈನಲ್ನಲ್ಲಿ ಅಬ್ಬರಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಗಿಲ್ ಕೇವಲ 13 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು.

ಇನ್ನು ನಾಯಕನ ಜವಬ್ದಾರಿ ಹೊರಬೇಕಾಗಿದ್ದ ರೋಹಿತ್ ಶರ್ಮಾ ಕೂಡ ತಮ್ಮ ಕಳಪೆ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿದ್ದಾರೆ. ಐಪಿಎಲ್ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ರೋಹಿತ್, ಡಬ್ಲ್ಯುಟಿಸಿ ಫೈನಲ್ನಲ್ಲೂ ಕೇವಲ 15 ರನ್ಗಳಿಗೆ ಬ್ಯಾಟ್ ಎತ್ತಿಟ್ಟಿದ್ದಾರೆ. ಆದರೆ ಬಾರಿಸಿದ್ದು ಕೇವಲ 15 ರನ್ ಆದರೂ ಡಬ್ಲ್ಯುಟಿಸಿಯಲ್ಲಿ ಭಾರತದ ಪರ ಮಹತ್ವದ ದಾಖಲೆ ಬರೆದಿದ್ದಾರೆ.

ಆಸೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 15 ರನ್ ಬಾರಿಸಿದ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರನ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಈ ಮುಂಚೆ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ರೋಹಿತ್ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ರೋಹಿತ್ಗೂ ಮುನ್ನ ವಿರಾಟ್ ಕೊಹ್ಲಿ ಡಬ್ಲ್ಯುಟಿಸಿಯಲ್ಲಿ 1803 ರನ್ ಬಾರಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರು. ಇದೀಗ 1809 ರನ್ ಪೂರೈಸಿರುವ ರೋಹಿತ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಆದರೆ ರೋಹಿತ್ ದಾಖಲೆ ಹೆಚ್ಚು ಹೊತ್ತು ಅವರ ಹೆಸರಿನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಅಜೇಯ 14 ರನ್ ಬಾರಿಸಿ ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತದ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.